×
Ad

ಫಝಲ್ ಕೊಲೆ ಪ್ರಕರಣ: ಆರೆಸ್ಸೆಸ್ ಕಾರ್ಯಕರ್ತನ ತಪ್ಪೊಪ್ಪಿಗೆಯ ವಿಡಿಯೋ ವೈರಲ್

Update: 2017-06-09 22:25 IST

ಕೇರಳ, ಜೂ.9: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತ ಫಝಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ಕಾರ್ಯಕರ್ತ ಸುಬೀಶ್ ತಾನು ಈ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಳ್ಳುತ್ತಿರುವ ವಿಡಿಯೋವನ್ನು ಕೊಚ್ಚಿಯ ಸಿಬಿಐ ಕೋರ್ಟ್ ಗೆ ಸಲ್ಲಿಸಲಾಗಿದೆ.

ಫಝಲ್ ಕೊಲೆ ಪ್ರಕರಣದ ಆರೋಪಿ ಸಿಪಿಎಂ ನಾಯಕ ಕರಾಯಿ ರಾಜನ್ ಈ ತಪ್ಪೊಪ್ಪಿಗೆಯ ವಿಡಿಯೋವನ್ನು ಕೋರ್ಟ್ ಗೆ ಸಲ್ಲಿಸಿದ್ದಾರೆ. 2006ರ ಅಕ್ಟೋಬರ್ 22ರಂದು ತಲಶ್ಶೇರಿಯಲ್ಲಿ ಇತರ ನಾಲ್ವರು ಆರೆಸ್ಸೆಸ್ ಕಾರ್ಯಕರ್ತರೊಂದಿಗೆ ಸೇರಿ ಫಝಲ್ ರನ್ನು ಕೊಲೆಗೈದಿರುವುದಾಗಿ ಸುಬೀಶ್ ಒಪ್ಪಿಕೊಂಡಿರುವ ದೃಶ್ಯಗಳು ವಿಡಿಯೋದಲ್ಲಿದೆ.

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ತಾನು ಈ ಕೃತ್ಯ ಎಸಗಿರುವುದಾಗಿ ಸುಬೀಶ್ ಹೇಳಿದ್ದು, ಆರೆಸ್ಸೆಸ್ ಹಾಗೂ ಬಿಜೆಪಿ ನಾಯಕರು ಈ ಕೃತ್ಯ ಎಸಗಲು ಹೇಳಿರಲಿಲ್ಲ ಎಂದಿದ್ದಾನೆ. ಫಝಲ್ ರನ್ನು ಕೊಲೆಗೈದ ಬಳಿಕ ಸುಬೀಶ್ ಹಾಗೂ ಆತನ ಜೊತೆಗಿದ್ದ ಕೊಲೆಗಡುಕರು ಆರೆಸ್ಸೆಸ್ ನಾಯಕ ತಿಲಕನ್ ಮನೆಗೆ ತೆರಳಿದ್ದು, ಘಟನೆಯ ಬಗ್ಗೆ ತಿಳಿದ ತಿಲಕನ್ ಕೋಪಗೊಂಡು ತನ್ನ ಕೆನ್ನೆಗೆ ಬಾರಿಸಿದ್ದ ಎಂದು ಸುಬೀಶ್ ಹೇಳಿದ್ದಾನೆ. ನಂತರ ಫಝಲ್ ರನ್ನುಕೊಲೆಗೈಯಲು ಉಪಯೋಗಿಸಿದ್ದ ಮಾರಕಾಸ್ತ್ರಗಳನ್ನು ತನ್ನ ಮನೆಯಲ್ಲಿ ಇರಿಸಬೇಕು ಎಂದಿದ್ದ ತಿಲಕನ್ ಈ ಬಗ್ಗೆ ಯಾರೊಂದಿಗೂ ಬಾಯ್ಬಿಡಬೇಡಿ ಎಂದಿದ್ದ ಎಂದು ಸುಬೀಶ್ ಆರೋಪಿಸಿದ್ದಾನೆ.

“ಸೈಕಲ್ ನಲ್ಲಿ ಬರುತ್ತಿದ್ದ ಫಝಲ್ ಮೇಲೆ ನಾವು ದಾಳಿ ನಡೆಸಿದೆವು. ಆತ ಕೆಳಗೆ ಬಿದ್ದ. ನಮ್ಮಲ್ಲಿ ಇಬ್ಬರಲ್ಲಿ ಮಾರಕಾಸ್ತ್ರಗಳಿತ್ತು. ಆತ ಗಾಯಗೊಂಡಿದ್ದಾನೋ ಅಥವಾ ಮೃತಪಟ್ಟಿದ್ದಾನೋ ಎಂದು ನಮಗೆ ತಿಳಿದಿರಲಿಲ್ಲ. ಸ್ಥಳದಿಂದ ಪರಾರಿಯಾದ ನಾವು ತಿಲಕನ್ ಮನೆಗೆ ಹೋದೆವು. ಫಝಲ್ ಎಷ್ಟು ಗಾಯಗೊಂಡಿದ್ದಾನೆ ಎಂದು ಪ್ರಶ್ನಿಸಿದ ಅವರು, ನನ್ನ ಕೆನ್ನೆಗೆ ಹೊಡೆದರು” ಎಂಬ ಸುಬೀಶ್ ಮಾತುಗಳು ವಿಡಿಯೋದಲ್ಲಿದೆ.

2016ರ ಅಕ್ಟೋಬರ್ ನಲ್ಲಿ ಸಿಪಿಎಂ ಕಾರ್ಯಕರ್ತ ಪದುವಿಳೈ ಮೋಹನನ್ ಕೊಲೆ ಪ್ರಕರಣದಲ್ಲಿ ಸುಬೀಶ್ ನನ್ನು ಪೊಲೀಸರು ಬಂಧಿಸಿದ್ದು, ಈ ಸಂದರ್ಭ ಆತ ತಪ್ಪೊಪ್ಪಿಕೊಂಡಿದ್ದ. ಫಝಲ್ ಕೊಲೆ ಪ್ರಕರಣ ಸ್ಥಳೀಯ ಪೊಲೀಸರಿಂದ ಕ್ರೈಂ ಬ್ರಾಂಚ್ ಗೆ ಹಾಗೂ ಅಲ್ಲಿಂದ ಸಿಬಿಐಗೆ ಹಸ್ತಾಂತರಗೊಂಡಿತ್ತು. ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದ ಕರಾಯಿ ರಾಜನ್ ಹಾಗೂ ಚಂದ್ರಶೇಖರನ್ 2012ರ ಜೂನ್ ನಲ್ಲಿ ನ್ಯಾಯಾಲಯದ ಮುಂದೆ ಶರಣಾಗಿದ್ದರು. 2013ರಲ್ಲಿ ಕೇರಳ ಹೈಕೋರ್ಟ್ ಇವರಿಬ್ಬರಿಗೆ ಜಾಮೀನು ನೀಡಿ, ಎರ್ನಾಕುಳಂ ಜಿಲ್ಲೆ ಬಿಟ್ಟು ಹೊರಹೋಗದಂತೆ ಆದೇಶಿಸಿತ್ತು.

ಫಝಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ಸದಸ್ಯರ ಬಂಧನವಾದ ಮೇಲೂ ತಾನು ಹಾಗೂ ಸಹಚರರು ಸುಮ್ಮನಿದ್ದೆವು ಎಂದು ಸುಬೀಶ್ ವಿಡಿಯೋದಲ್ಲಿ ಬಾಯ್ಬಿಟ್ಟಿದ್ದ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News