ಡಿಸಿ ಕಚೇರಿ ನಿರ್ಮಿಸಲುದ್ದೇಶಿಸಿರುವ ಭೂಮಿ ಡೀಮ್ಡ್ ಫಾರೆಸ್ಟ್

Update: 2017-06-09 18:19 GMT

ಮಂಗಳೂರು, ಜೂ.9: ಪಡೀಲ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿಯ ಹೊಸ ಸಂಕೀರ್ಣ ನಿರ್ಮಿಸಲು ಉದ್ದೇಶಿಸಿರುವ ಭೂಮಿ ಡೀಮ್ಡ್ ಫಾರೆಸ್ಟ್ ಎನ್ನುವುದನ್ನು ಡೀಮ್ಡ್ ಫಾರೆಸ್ಟ್ ಸಮಿತಿ, ಮಂಗಳೂರು ವಿವಿಯ ಸಸ್ಯಸಾಸ್ತ್ರ ವಿಭಾಗದ ಡಾ.ಕೃಷ್ಣಕುಮಾರ್ ಜಿ. ಹಾಗೂ ಪರಿಸರ ಪರ ವಕೀಲರ ಸಹಭಾಗಿತ್ವದ ಜಂಟಿ ಸಮೀಕ್ಷೆ ಸಾಬೀತುಗೊಳಿಸಿದೆ.

 ಪಡೀಲ್‌ನ ಅರಣ್ಯ ಪ್ರದೇಶದಲ್ಲಿ ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಷ್ಟ್ರೀಯ ಪರಿಸರ ಸಂಘಟನೆಗಳ ಒಕ್ಕೂಟದ ಪ್ರ. ಕಾರ್ಯದರ್ಶಿ ಎಚ್.ಶಶಿಧರ್ ಶೆಟ್ಟಿ, ಈ ಜಾಗ ಡೀಮ್ಡ್ ಫಾರೆಸ್ಟ್ ಎಂದು ನಿರ್ಧರಿಸಲು ಯಾವುದೇ ಆಧಾರ ಇಲ್ಲ ಎಂದು ಈ ಹಿಂದೆ ಜಿಲ್ಲಾಡಳಿತದ ನೇತೃತ್ವದ ಸಮಿತಿ ಕೊರ್ಟಿಗೆ ಹೇಳಿಕೆ ನೀಡಿತ್ತು. ಜಂಟಿ ಸಮೀಕ್ಷೆಯಿಂದ ಪ್ರಸ್ತುತ ಸತ್ಯ ಬಯಲಾಗಿದೆ ಎಂದರು.

ಡೀಮ್ಡ್ ಫಾರೆಸ್ಟ್ ಎಂದು ಕರೆಸಿಕೊಳ್ಳಲು ನಿರ್ದಿಷ್ಟ ಪ್ರದೇಶ ಎರಡು ಹೆಕ್ಟೇರ್ (5.89 ಎಕರೆ) ಪ್ರದೇಶ ಹೊಂದಿರಬೇಕು. ಒಂದು ಹೆಕ್ಟೇರ್‌ನಲ್ಲಿ ಸಹಜವಾಗಿ ಬೆಳೆದ ಕನಿಷ್ಠ 50 ಮರಗಳಿರಬೇಕು ಅಥವಾ ಬೆಳೆಸಿದ 100 ಮರಗಳಿರಬೇಕು.

ಎದೆಯ ಎತ್ತರದಲ್ಲಿ ಮರದ ಸುತ್ತಳತೆ ಕನಿಷ್ಠ 30 ಸೆ.ಮೀ. ಇರಬೇಕು. ಪಡೀಲ್‌ನಲ್ಲಿ 2.38 ಹೆಕ್ಟೇರ್ ಪ್ರದೇಶ ಅರಣ್ಯವಿದ್ದು, ಡಿಸಿ ಕಚೇರಿ ಸಂಕೀರ್ಣ ನಿರ್ಮಿಸುವ ಉದ್ದೇಶದಿಂದ ಈ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ಹೊರಗಿಡಲು ಇಲ್ಲಿ 1.8 ಹೆಕ್ಟೇರ್ ಮಾತ್ರ ಭೂಮಿ ಇರುವುದಾಗಿ ಈ ಹಿಂದೆ ಜಿಲ್ಲಾಡಳಿತ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ಒದಗಿಸಿತ್ತು. ಇಲ್ಲಿ ಸಹಜವಾಗಿ ಬೆಳೆದ 66 ಮತ್ತು ನೆಟ್ಟು ಬೆಳೆಸಿದ 320 ಒಟ್ಟು 386 ಮರಗಳಿವೆ ಎಂದು ಜಿಲ್ಲಾಡಳಿತ ನ್ಯಾಯಾಲಯಕ್ಕೆ ಇನ್ನೊಂದು ಸುಳ್ಳು ಲೆಕ್ಕ ಒದಗಿಸಿತ್ತು. ಆದರೆ ನ್ಯಾಯಾಲಯದ ನಿರ್ದೇಶನದ ಪ್ರಕಾರ ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಇಲ್ಲಿ ಒಟ್ಟು 502 ಮರ ಇರುವುದು ದಾಖಲಾಗಿದೆ ಎಂದರು. ಈ ಅರಣ್ಯ ಪ್ರದೇಶದಲ್ಲಿ ವರ್ಷಂಪ್ರತಿ ಸುಮಾರು 1.5 ಲಕ್ಷ ವೈವಿಧ್ಯಮಯ ಗಿಡಗಳನ್ನು ಬೆಳೆಸಿ ವಿವಿಧೆಡೆ ಪೂರೈಸಲಾಗುತ್ತಿದೆ. ಈ ಪ್ರದೇಶದಲ್ಲಿ 20ಕ್ಕೂ ಅಧಿಕ ನವಿಲುಗಳಿದ್ದು, ಪುನುಗು ಬೆಕ್ಕು, ಮುಂಗುಸಿ ಸಹಿತ ಅನೇಕ ಪ್ರಾಣಿಗಳು ಇಲ್ಲಿ ಕಾಣ ಸಿಗುತ್ತವೆ ಎಂದವರು ಹೇಳಿದರು. 2016, ಎಪ್ರಿಲ್ 26 ರಿಂದ 2017, ಫೆಬ್ರವರಿ 20 ತನಕ ನಡೆದ ಎರಡು ವಿಚಾರಣೆಗೆ ಗೈರು ಹಾಜರಾದ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಡೀಮ್ಡ್ ಫಾರೆಸ್ಟ್ ಸಮಿತಿಗೆ ನ್ಯಾಯಾಲಯ 10 ಸಾವಿರ ರೂ. ದಂಡ ವಿಧಿಸಿದೆ ಎಂದು ಶಶಿಧರ್ ಶೆಟ್ಟಿ ಹೇಳಿದರು.

2017, ಫೆಬ್ರವರಿ 20 ರಂದು ಜಿಲ್ಲಾಧಿಕಾರಿ ಕಚೇರಿ ಹೊಸ ಸಂಕೀರ್ಣ ಸಂಬಂಧಿಸಿದ ಜಿಲ್ಲಾಡಳಿತದ ಫೈಲನ್ನು ಚೆನ್ನೈಯ ಹಸಿರು ಪೀಠ ತಿರಸ್ಕರಿಸಿದ್ದು, ಜಿಲ್ಲಾಡಳಿತ ಮತ್ತೆ ಅವಕಾಶ ಕೋರಿ ಮರು ಅರ್ಜಿ ಸಲ್ಲಿಸಿದೆ. 2017 ಜುಲೈ ಏಳರಂದು ಮುಂದಿನ ವಿಚಾರಣೆ ನಡೆಯಲಿದೆ ಎಂದರು.

ಪರಿಸರವಾದಿಗಳಾದ ಸ್ವರ್ಣ ಸುಂದರ್, ರತ್ನಾಕರ್, ಅನಿತಾ ಭಂಡಾರ್ಕರ್, ಕಲಾವತಿ ಪದ್ಮನಾಭ, ಶ್ರೀಪತಿ ಆಚಾರ್, ನಾರಾಯಣ್‌ಬಂಗೇರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News