ಸಂವೇದನೆ, ಭಾಷಾ ಸೂಕ್ಷ್ಮವನ್ನು ‘ಬಂಡಾಯ-ದಲಿತ ಸಾಹಿತ್ಯ’ ಕಳೆಯಿತು: ಗಿರಡ್ಡಿ ಗೋವಿಂದರಾಜ್

Update: 2017-06-09 18:27 GMT

ಉಡುಪಿ, ಜೂ.9: ನವ್ಯರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಂದುಕೊಟ್ಟ ಸಂವೇದನೆಯ ಸೂಕ್ಷ್ಮತೆ ಹಾಗೂ ಭಾಷಾ ಸೂಕ್ಷ್ಮವನ್ನು ಬಂಡಾಯ ಹಾಗೂ ದಲಿತ ಸಾಹಿತ್ಯಗಳು ಕಳೆದವು ಎಂದು ಕನ್ನಡದ ಖ್ಯಾತ ವಿಮರ್ಶಕ ಹಾಗೂ ಲೇಖಕ ಪ್ರೊ.ಗಿರಡ್ಡಿ ಗೋವಿಂದರಾಜ್ ಹೇಳಿದ್ದಾರೆ.

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ವಿವಿ ಜಂಟಿ ಯಾಗಿ ಎಂಜಿಎಂ ಕಾಲೇಜು ಆವರಣ ದಲ್ಲಿರುವ ಆರ್‌ಆರ್‌ಸಿಯ ಧ್ವನ್ಯಾಲೋಕದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಕನ್ನಡ ಸಾಹಿತ್ಯದ ವೈಚಾರಿಕ ನೆಲೆಗಳು’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

ನವೋದಯ, ನವ್ಯ ಸಾಹಿತ್ಯ ಪ್ರಕಾರ ಗಳಂತಲ್ಲದೇ ದಲಿತ-ಬಂಡಾಯ ಸಾಹಿತ್ಯ ಸಮಾ ಜದಲ್ಲಿ ಬದಲಾವಣೆಯನ್ನೇ ಪ್ರಮುಖ ಗುರಿ ಯಾಗಿಸಿ ಕೊಂಡಿದ್ದವು. ಜನರಿಗೆ ಅರ್ಥವಾಗುವ ಭಾಷೆಯನ್ನು ಒರಟಾಗಿ ಅವರು ಬಳಸಿ ಕೊಂಡರು. ಸಮಾಜದಲ್ಲಿ ಅರಿವು ಮೂಡಿಸಲು ಸಮುದಾಯ ದಂತೆ ತಂಡ ಕಟ್ಟಿ ನಾಟಕ, ಬೀದಿ ನಾಟಕಗಳನ್ನು ಆಡಿದರು ಎಂದು ಹೇಳಿದರು.

ನವೋದಯ ಕಾಲದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾಣಿಸಿಕೊಂಡ ಕುವೆಂಪು, ಕಾರಂತ, ಬೇಂದ್ರೆ, ಮಾಸ್ತಿಯಂಥ ದೈತ್ಯ ಪ್ರತಿಭೆ ಮುಂದೆ ಹೆಚ್ಚು ಪ್ರಮಾಣದಲ್ಲಿ ಬರಲಿಲ್ಲ. ನವ್ಯಕಾಲದ ಸಾಹಿತಿಗಳು ಅಸ್ತಿತ್ವವಾದದ ಚಿಂತನೆಗೆ ಒತ್ತು ಕೊಟ್ಟರು. ಅನಂತಮೂರ್ತಿ ಅವರ ‘ಸಂಸ್ಕಾರ’, ಶಾಂತಿನಾಥ ದೇಸಾಯಿಯವರ ಕಾದಂಬರಿಗಳಲ್ಲಿ ಇದು ನಮಗೆ ಕಾಣಸಿಗುತ್ತದೆ. ನವ್ಯ ಪ್ರಕಾರದಲ್ಲಿ ಸಂದಿಗ್ಧತೆಯನ್ನು ನಾವು ಗುರುತಿಸಬಹುದು. ನವ್ಯ ಸಾಹಿತ್ಯಗಳು ಸ್ಪಷ್ಟ ನಿಲುವು ತೆಗೆದುಕೊಳ್ಳದೆ, ಅಡ್ಡಗೋಡೆ ಮೇಲೆ ದೀಪವಿಟ್ಟು ಮಾತನಾಡುವುದನ್ನು ನಾವು ನೋಡಬಹುದು ಎಂದು ಪ್ರೊ.ಗಿರಡ್ಡಿ ಹೇಳಿದರು.

ನವೋದಯದ ಸಂದರ್ಭದಲ್ಲಿ ಕನ್ನಡ ಎಂಬುದು ಪೂರ್ಣಪ್ರಮಾಣದಲ್ಲಿ ರೂಪುಗೊಂಡಿರಲಿಲ್ಲ. ಕಾರಂತ, ಬೇಂದ್ರೆ ಅವರು ಇಡೀ ನಾಡಿಗೆ ಅರ್ಥವಾಗುವಂತೆ ಬರೆದರು. ಕಾರಂತರಂತೂ ಕನ್ನಡದ ತಟಸ್ಥ ಭಾಷೆಯಲ್ಲೇ ಬರೆದರು. ಇದನ್ನು ಪ್ರಶ್ನಿಸಿದವರಿಗೆ ನನ್ನ ಕೋಟ ಕನ್ನಡದಲ್ಲಿ ಬರೆದರೆ, ಕುಂದಾಪುರದವರಿಗೆ ಬಿಟ್ಟು ಬೇರೆಯವರಿಗೆ ಅರ್ಥವಾಗುವುದಿಲ್ಲ ಎಂದು ಬಿಟ್ಟರು ಎಂದು ಗಿರಡ್ಡಿ ಹೇಳಿದರು.

ಕಾಣದ ಚಳವಳಿ: 21ನೆ ಶತಮಾ ನದ ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಯಾವುದೇ ವಿಶೇಷ ವಾದ ಚಳವಳಿ ಕಂಡುಬಂದಿಲ್ಲ. ಚಳವಳಿ ಇದ್ದರೆ ಒಂದು ವಿಧದ ಲಾಭ, ಇಲ್ಲದಿದ್ದರೆ ಇನ್ನೊಂದು ರೀತಿ ಲಾಭ ಎಂದು ಅವರು ವಿಶ್ಲೇಷಿಸಿದರು. ಇದ್ದರೆ ಒಂದು ಸ್ಪಷ್ಟ ಮಾದರಿ ಮೂಡಿ ಅದನ್ನು ಎಲ್ಲರೂ ಬಳಸಿ ಕೊಳ್ಳಬಹುದು ಎಂದರು.

ಈಗಿನ ಲೇಖಕರ ಬರವಣಿಗೆಯಲ್ಲಿ ನವೋ ದಯ ಕಾಲದ ಕುವೆಂಪು, ಕಾರಂತ, ಬೇಂದ್ರೆ ದೈತ್ಯ ಪ್ರತಿಭೆಗಳಾಗಲಿ, ನವ್ಯದ ಅಡಿಗ, ಲಂಕೇಶ, ಅನಂತಮೂರ್ತಿಯಂಥ ದೊಡ್ಡ ಪ್ರತಿಭೆಗಳಾಗಲಿ ಕಾಣುತ್ತಿಲ್ಲ. ಯಾವುದೇ ಪ್ರಕಾರಗಳಿಲ್ಲದೇ ಇರುವುದರಿಂದ ಎಲ್ಲದರ ಮಿಶ್ರಣವನ್ನು ನಾವು ಗುರುತಿಸಬಹುದು ಎಂದು ಪ್ರೊ.ಗಿರಡ್ಡಿ ಹೇಳಿದರು.

ಈಗಿನ ಸಾಹಿತ್ಯ ಪ್ರಕಾರದಲ್ಲಿ ಮಿಶ್ರಣ ವ್ಯಾಪಕ ವಾಗಿದೆ. ತಮ್ಮ ಅನುಭವಕ್ಕೆ ಹಾಗೂ ಅಭಿವ್ಯಕ್ತಿಗೆ ಸಾಹಿತ್ಯವನ್ನು ಬಳಸಿಕೊಳುತ್ತಿದ್ದಾರೆ. ನವ್ಯ ಪ್ರಕಾರ ವಿಷಯ ಕೇಂದ್ರಿತವಾಗಿದ್ದರೆ, ಈಗ ಅಂಥ ಕೇಂದ್ರ ಇರಬೇಕಾಗಿಲ್ಲ. ಕಾರ್ನಾಡರ ನಾಟಕಗಳಲ್ಲಿ 4-5 ಕತೆಗಳಿದ್ದರೂ ಅವುಗಳಿಗೆ ಕೇಂದ್ರವಿಲ್ಲ ಎಂದರು.

ಸಾಹಿತ್ಯದ ಹೊಸ ತಲೆಮಾರು: 

ಈಗಿನ ತಲೆ ಮಾರಿನ ಹೊಸ ತರುಣ ಪ್ರತಿಭೆಗಳು ಹೊಸ ವಿಷಯಗಳೊಂದಿಗೆ ಬಹಳ ಚೆನ್ನಾಗಿ ಬರೆಯು ತ್ತಿದ್ದಾರೆ. ಈ ದಿಶೆಯಲ್ಲಿ ನಾಗರಾಜ ವಸ್ತಾರೆ ಅವರ ‘90 ಡಿಗ್ರಿ’ ಕೃತಿಯ ‘ಜುಮ್ಮೆಂದಿ ನಾದ’ದಂಥ ಕತೆ ಈಗಿನ ತಲೆಮಾರಿನ ಧೋರಣೆಯನ್ನು ದಿಟ್ಟವಾಗಿ ತೆರೆದಿಡುತ್ತದೆ. ಜೀವನ ಶೈಲಿ, ಬದುಕಿನ ವೌಲ್ಯ, ವೈಚಾರಿಕ ನಿಲುವುಗಳು ಬದಲಾಗಿರುವುದನ್ನು ಇವು ಸೂಚಿಸುತ್ತವೆ. ವೈವಿಧ್ಯತೆ ಇರುವ ಒಳ್ಳೆಯ ಕತೆಗಳು ಕಂಡುಬರುತ್ತಿವೆ ಎಂದು ಹೊಸ ತಲೆಮಾರಿನ ಲೇಖಕರನ್ನು ಹೊಗಳಿದರು.

ಇವು ಇವತ್ತಿನ ಸಾಹಿತ್ಯದ ಸ್ಥಿತಿ. ಮುಂದೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಅವುಗಳ ವೈಚಾರಿಕ ನಿಲುವು ಸ್ಪಷ್ಟವಾಗಿಲ್ಲ ಎಂದು ಗಿರಡ್ಡಿ ತಿಳಿಸಿದರು.

ಬೇಂದ್ರೆ-ಶಂ.ಬಾ.ಜೋಶಿ ಕಲಹ

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದ ಸಾಹಿತಿಗಳ ಜಗಳಗಳಲ್ಲಿ ಹೆಚ್ಚು ಪ್ರಚಾರ ಪಡೆದ ದ.ರಾ. ಬೇಂದ್ರೆ ಹಾಗೂ ಶಂ.ಬಾ.ಜೋಶಿ ನಡುವಿನ ಜಗಳದ ಕುರಿತು ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರೊ. ಗಿರಡ್ಡಿ ಗೋವಿಂದರಾಜ, ಕೆಲವು ವಿಷಯಗಳಲ್ಲಿದ್ದ ಅಭಿಪ್ರಾಯ ಭಿನ್ನತೆಯೇ ಇವರಿಬ್ಬರ ಜಗಳಕ್ಕೆ ಮೂಲಕಾರಣವಾಗಿದ್ದು, ಕೊನೆಯ ತನಕ ಮುಂದುವರಿಯಿತು ಎಂದರು.

ಇಂದು ಕೆಟ್ಟ ರೀತಿಯ ಅಸಹಿಷ್ಣುತೆ ಹುಟ್ಟಿಕೊಂಡಿದೆ. ಭಿನ್ನ ಅಭಿಪ್ರಾಯವನ್ನು ಸಹಿಸದ ಸ್ಥಿತಿ ಇಂದಿದೆ. ವಿದ್ವಾಂಸ ಎಂ.ಎಂ.ಕಲಬುರ್ಗಿ ಅವರ ಕೊಲೆಯನ್ನು ಉದಾಹರಣೆಯಾಗಿ ನೀಡಿದರು. ಎಡ-ಬಲದ ಹೊರತಾಗಿ ತಾವು ಧಾರವಾಡದಲ್ಲಿ ಇತ್ತೀಚಿನ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಪ್ರತಿಪಾದಿಸಿದ ಮಧ್ಯಮ ಮಾರ್ಗದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ಗಿರಡ್ಡಿ, ಮಧ್ಯಮ ಮಾರ್ಗ ಸಿದ್ಧಾಂತವಾಗಿ ರೂಪುಗೊಳ್ಳುವ ಸಾಧ್ಯತೆ ಅತ್ಯಂತ ಕ್ಷೀಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಎಡ-ಬಲ ಎರಡರ ಒಳ್ಳೆಯ ಅಂಶಗಳನ್ನು ಬಳಸಿಕೊಂಡು ನಿಷ್ಪಕ್ಷಪಾತವಾದ ನಿಲುವನ್ನು ತೆಗೆದುಕೊಳ್ಳುವುದು ತಮ್ಮ ಉದ್ದೇಶವಾಗಿತ್ತು. ಶೇ.80ರಷ್ಟು ಜನರು ಇದನ್ನು ಒಪ್ಪುತ್ತಾರೆ ಎಂದು ತಾನು ಭಾವಿಸಿದ್ದಾಗಿ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News