ಜೂ.12-24: ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ

Update: 2017-06-09 18:28 GMT

ಮಂಗಳೂರು, ಜೂ.9: ರಾಷ್ಟ್ರೀಯ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಜೂ.12ರಿಂದ 24ರವರೆಗೆ ನಡೆಯಲಿದೆ. ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಭಾರ ಆರೋಗ್ಯಾಧಿಕಾರಿ ಡಾ. ಸಿಖಂದರ್ ಪಾಷಾ ತಿಳಿಸಿದರು. 5 ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಭೇದಿಯಿಂದ ಸಂಭವಿಸುವ ಮರಣ ಸಂಖ್ಯೆಯನ್ನು ಕಡಿಮೆ ಮಾಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಲ್ಕಿ ಬಳಿಯ ಲಿಂಗಪ್ಪಯ್ಯನ ಕಾಡಿನ ಬಳಿ 12ರಂದು ಪೂರ್ವಾಹ್ನ 10:30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು. ಐದು ವರ್ಷದೊಳಗಿನ ಮಕ್ಕಳಿರುವ ಎಲ್ಲ ಮನೆಗಳಿಗೆ ಆಶಾ/ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಓಆರ್‌ಎಸ್ ಪ್ಯಾಕೆಟ್ ವಿತರಣೆ ಮಾಡ ಲಾಗುವುದು ಮತ್ತು ಒಆರ್‌ಎಸ್ ದ್ರಾವಣ ತಯಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುವುದು. ಆರೋಗ್ಯ ಸಂಸ್ಥೆಗಳಲ್ಲಿ ಮತ್ತು ಉಪ ಕೇಂದ್ರಗಳಲ್ಲಿ ಓಆರ್‌ಎಸ್ ಮತ್ತು ಜಿಂಕ್ ಕಾರ್ನರ್ ರಚಿಸುವುದು. ಭೇದಿ ಪ್ರಕರಣ ವರದಿಯಾದರೆ ಓಆರ್‌ಎಸ್ ನೀಡಿ ಬಳಿಕ 14 ದಿನಗಳ ಕಾಲ ಜಿಂಕ್ ಮಾತ್ರೆಗಳನ್ನು ನೀಡುವ ಕುರಿತು ವಿವರಿಸಲಾಗುವುದು ಎಂದರು.

ನವಜಾತ ಮತ್ತು ಎಳೆಯ ಮಕ್ಕಳಿಗೆ 6 ತಿಂಗಳ ಒಳಗೆ ಕಡ್ಡಾಯವಾಗಿ ಎದೆ ಹಾಲು ಮಾತ್ರ ನೀಡುವಂತೆ ಮನ ವೊಲಿಸುವುದು. 6 ತಿಂಗಳ ಬಳಿಕ ಪೂರಕ ಆಹಾರ ನೀಡುವ ವಿವರ ನೀಡುವುದು ಈ ಜಾಗೃತಿ ಕಾರ್ಯ ಕ್ರಮದ ಉದ್ದೇಶ ಎಂದರು. ಇದಕ್ಕೆ ಪೂರಕವಾಗಿ ನೈರ್ಮಲ್ಯದ ಅರಿವು ಮೂಡಿಸುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಕೈ ತೊಳೆಯುವ ಬಗ್ಗೆ ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ಶಿಕ್ಷಕರು, ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಅಡುಗೆಯವರಿಗೆ ಈ ವಿವರ ನೀಡಲಾಗುವುದು. ಮಳೆಗಾಲದಲ್ಲಿ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕುಡಿಯುವ ನೀರಿಗೆ ಕ್ಲೋರಿನ್ ಸಿಂಪಡಿಸುವಂತೆ 230 ಗ್ರಾಪಂಗಳ ಪಿಡಿಒಗಳಿಗೆ ವಿಶೇಷ ಸೂಚನೆ ನೀಡಲಾಗಿದೆ ಎಂದು ಆರ್‌ಸಿಎಚ್ ಅಧಿಕಾರಿ ಡಾ. ಅಶೋಕ್ ಹೇಳಿದರು. ಅತಿಸಾರ ಉಂಟಾದಾಗ ನಿರ್ಜಲೀಕರಣ (ಡಿಹೈಡ್ರೇ ಶನ್) ಸಾಮಾನ್ಯ. ಆದ್ದರಿಂದ ಮಗುವಿಗೆ ಎದೆ ಹಾಲು ಕುಡಿಸು ವುದನ್ನು, ದ್ರವ ಆಹಾರ ನೀಡುವುದನ್ನು ಮುಂದು ವರೆಸಬೇಕು ಎಂದು ಅವರು ಕಿವಿ ಮಾತು ಹೇಳಿದರು.

 5ವರ್ಷದೊಳಗಿನ ಮಕ್ಕಳ ಮರಣದಲ್ಲಿ ಶೇ 10ರಷ್ಟು ಅತಿಸಾರ ಭೇದಿಯಿಂದ ಮರಣ ಸಂಭವಿಸಿರುತ್ತದೆ. ದಕ್ಷಿಣ ಕನ್ನಡದಲ್ಲಿ 2016-17ನೆ ಸಾಲಿನಲ್ಲಿ 310 ಮಂದಿ 5 ವರ್ಷದೊಳಗಿನ ಮಕ್ಕಳು ಸಾವಿಗೀಡಾಗಿದ್ದಾರೆ. ಆದರೆ ಅತಿಸಾರ ಭೇದಿಯಿಂದ ಯಾವುದೇ ಮಗು ಮರಣ ಹೊಂದಿಲ್ಲ ಎನ್ನುವುದು ಸಮಾಧಾನಕರ ಸಂಗತಿ ಎಂದು ಡಾ. ಸಿಖಂದರ್ ಪಾಷಾ ಹೇಳಿದರು.

ಜಿಲ್ಲೆಯ ವೈದ್ಯರಿಬ್ಬರು ತೆಲಂಗಾಣದಲ್ಲಿ

ದಡಾರ ಮತ್ತು ರುಬೆಲ್ಲಾ ರೋಗಗಳನ್ನು ತಡೆಯುವ ನಿಟ್ಟಿನಲ್ಲಿ ದ.ಕ. ಜಿಲ್ಲೆಯಲ್ಲಿ ನಡೆಸಲಾದ ಯಶಸ್ವಿ ಅಭಿಯಾನದ ಹಿನ್ನೆಲೆಯಲ್ಲಿ ಜಿಲ್ಲೆಯ ಇಬ್ಬರು ವೈದ್ಯರು ತೆಲಂಗಾಣ ರಾಜ್ಯಕ್ಕಾಗಿ ವಿಶೇಷ ಆಹ್ವಾನದ ಮೇರೆಗೆ ಕರ್ತವ್ಯ ನಿಮಿತ್ತ ತೆರಳಿದ್ದಾರೆ ಎಂದು ಆರ್‌ಸಿಎಚ್ ಅಧಿಕಾರಿ ಡಾ.ಅಶೋಕ್ ಹೇಳಿದರು.

ಕೊಂಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಚಿರಾಗ್ ಹಾಗೂ ನೆಲ್ಯಾಡಿಯ ಡಾ. ಕೃಷ್ಣಾನಂದ ತೆಲಂಗಾಣದಲ್ಲಿ ನಾಲ್ಕು ತಿಂಗಳ ವಿಶೇಷ ಅಭಿಯಾನದಲ್ಲಿ ದಡಾರ ಹಾಗೂ ರುಬೆಲ್ಲಾ ತಡೆ ಲಸಿಕಾ ಅಭಿಯಾನದಲ್ಲಿ ಪಾಲ್ಗೊ ಳ್ಳಲಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News