ಚರಂಡಿ ಬ್ಲಾಕ್: ರಸ್ತೆಯಲ್ಲಿ ಹರಿಯುತ್ತಿರುವ ನೀರು

Update: 2017-06-10 09:27 GMT

 ಬಂಟ್ವಾಳ, ಜೂ.10: ವಿವಿಧ ಕಾಮಗಾರಿಗಳಿಂದ ಚರಂಡಿಗಳು ಮುಚ್ಚಿರುವುದು ಹಾಗೂ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಶುಕ್ರವಾರ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಬಿ.ಸಿ.ರೋಡ್ ಪರಿಸರ ಸಂಪೂರ್ಣವಾಗಿ ಬಸವಳಿದಿದೆ.

ಬಂಟ್ವಾಳ ತಾಲೂಕಿನಾದ್ಯಂತ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗಿನವರೆಗೆ ಭಾರೀ ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್, ಕೈಕಂಬ, ಪಾಣೆಮಂಗಳೂರು ಪ್ರದೇಶದಲ್ಲಿ ಚರಂಡಿಯಲ್ಲಿ ಮಳೆ ನೀರು ಹರಿಯದೆ ಪಾದಾಚಾರಿಗಳಿಗೆ ಹಾಗೂ ವಾಹನ ಸಂಚಾರಕ್ಕೆ ತೀವ್ರ ಅಡಚನೆಯಾಗಿದೆ.

ಕೈಕಂಬ: ಕೆಲವು ತಿಂಗಳ ಹಿಂದೆ ಬಸ್‌ಬೇ ನಿರ್ಮಾಣಕ್ಕೆಂದು ಕೈಕಂಬ ರಸ್ತೆ ಬದಿಯಲ್ಲಿ ಅಗೆದಿರುವ ಮಣ್ಣನ್ನು ಇಲ್ಲಿನ ಚರಂಡಿಯ ಮೇಲೆ ರಾಶಿ ಹಾಕಲಾಗಿತ್ತು. ಅಲ್ಲದೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಸಮಗ್ರ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಅಳವಡಿಕೆಯ ಸಂದರ್ಭದಲ್ಲಿ ಅಗೆದು ಸಡಿಲಗೊಂಡಿರುವ ಮಣ್ಣು ಕರಗಿ ಚರಂಡಿಗಳಲ್ಲಿ ತುಂಬಿಕೊಂಡಿದೆ. ಕೆಲವು ದಿನಗಳಲ್ಲಿ ಸಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದರೂ ನೀರು ಇಂಗುತ್ತಿರುವುದರಿಂದ ಯಾವುದೇ ಸಮಸ್ಯೆ ಸೃಷ್ಟಿಯಾಗಿರಲಿಲ್ಲ. ಶುಕ್ರವಾರ ರಾತ್ರಿಯಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಕೈಕಂಬ ಪ್ರದೇಶದಲ್ಲಿ ಮಳೆ ನೀರು ಹರಿಯಲಾಗದೆ ರಸ್ತೆಯಲ್ಲೇ ಕೊಳದ ಮಾದರಿಯಲ್ಲಿ ತುಂಬಿದ್ದು, ಕೃತಕ ನೆರೆ ಉಂಟಾಗಿದೆ.

ಕೈಕಂಬ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊಣಕಾಲಿನವರೆಗೆ ನೀರು ನಿಂತಿರುವ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡಚನೆ ಉಂಟಾಗಿದೆ. ಇತರ ವಾಹನಗಳು ನಿಧಾನವಾಗಿ ಸಂಚಾರಿಸಿದರೆ ದ್ವಿಚಕ್ರ ವಾಹನ ಸವಾರರು ನೀರು ದಾಟಲು ಸಂಕಷ್ಟಪಡುತ್ತಿರುವ ದೃಶ್ಯ ಬೆಳಗ್ಗೆಯಿಂದ ಕಂಡುಬರುತ್ತಿದೆ. ಹಾಗೆಯೇ ರಸ್ತೆ ತುಂಬಾ ನೀರು ನಿಂತಿರುವುದರಿಂದ ಪಾದಚಾರಿಗಳಿಗೆ ನಡೆದಾಡಲು ಜಾಗವೇ ಇಲ್ಲವಾಗಿದ್ದು, ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬಿ.ಸಿ.ರೋಡ್: ಬಿ.ಸಿ.ರೋಡ್ ಬಿಎಸ್ಸೆನ್ನೆಲ್ ಕಚೇರಿಯ ಎದುರು ಯಾವುದೋ ಕಾಮಗಾರಿಗಾಗಿ ಅಗೆದಿರುವ ಬೃಹತ್ ಹೊಂಡವನ್ನು ಮುಚ್ಚದೆ ಹಾಗೆಯೇ ಬಿಡಲಾಗಿದೆ. ಹೊಂಡದಲ್ಲಿ ಮಳೆ ನೀರು ತುಂಬಿದ್ದು, ಇದೇ ಜಾಗದಲ್ಲಿ ಪಾದಾಚಾರಿಗಳು ನಡೆದಾಡುತ್ತಿದ್ದಾರೆ. ಅಲ್ಲದೆ ಹೊಂಡದ ಪಕ್ಕದಲ್ಲೇ ಬಸ್‌ಗಳು ಪ್ರಯಾಣಿಕರನ್ನು ಹತ್ತಿಸುವುದು, ಇಳಿಸುವುದರಿಂದ ಸಾರ್ವಜನಿಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ಚರಂಡಿ ನಿರ್ಮಾಣದ ಕಾಮಗಾರಿ ಆರಂಭಿಸಿ ಹಲವು ತಿಂಗಳು ಕಳೆದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರ ನಡುವೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಸಮಗ್ರ ಕುಡಿಯುವ ನೀರು ಯೋಜನೆಯ ಪೈಪ್ ಅಳವಡಿಕೆ, ಬಿಎಸ್ಸೆನ್ನೆಲ್ ಸಂಸ್ಥೆಯ ಕೇಬಲ್ ಅಳವಡಿಕೆ ಕಾಮಗಾರಿಯಿಂದ ಮೊದಲೇ ಹದೆಗೆಟ್ಟಿದ್ದ ಬಿ.ಸಿ.ರೋಡ್ ಸರ್ವೀಸ್ ರಸ್ತೆ ಇದೀಗ ಸಂಪೂರ್ಣವಾಗಿ ಹದೆಗೆಟ್ಟಿದೆ. ಸರ್ವೀಸ್ ರಸ್ತೆಯಲ್ಲಿ ಬೃಹತ್ ಹೊಂಡಗಳಾಗಿದ್ದು, ಕೆಸರು ನೀರು ತುಂಬಿಕೊಂಡಿದೆ. ವಾಹನಗಳ ಸುಗಮ ಸಂಚಾರಕ್ಕೆ ತೊಡಕುಂಟಾಗಿದ್ದು ಆಗಾಗ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ.

ಸರ್ವೀಸ್ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ ರಾಜ ರಸ್ತೆ ಸೇರಿ ಇಡೀ ಬಿ.ಸಿ.ರೋಡ್ ಪಾದಾಚಾರಿಗಳಿಗೆ ನಡೆದಾಡಲು ಅಯೋಗ್ಯವಾಗಿದೆ. ಒಂದೆಡೆ ವಾಹನಗಳ ದಟ್ಟನೆ, ಇನ್ನೊಂದೆಡೆ ಕೆಸರಿನ ಸಿಂಚನ ಸಾರ್ವಜನಿಕರನ್ನು ಕಂಗೆಡಿಸಿದೆ. ಮಗದೊಂದೆಡೆ ಮೇಲ್ಸೇತುವೆಯಲ್ಲಿ ತುಂಬಿರುವ ಮಳೆ ನೀರು ವಾಹನಗಳ ಸಂಚಾರದ ವೇಳೆ ಸೇತುವೆಯ ಕೆಳಗೆ ನಡೆದುಕೊಂಡು ಹೋಗುವವರ ಮೇಲೆ ಸಿಂಚನಗೊಂಡು ಒದ್ದೆ ಮಾಡುತ್ತಿದೆ. ಹಲವು ವರ್ಷದ ಮಳೆಗಾಲವನ್ನು ಸಮಸ್ಯೆಗಳ ನಡುವೆಯೇ ಕಳೆದ ಬಿ.ಸಿ.ರೋಡಿನ ಪರಿಸ್ಥಿತಿ ಈ ವರ್ಷ ಭಿನ್ನವಾಗಿದೆ.

ಪಾಣೆಮಂಗಳೂರು: ಪಾಣೆಮಂಗಳೂರು ಕಲ್ಲುರ್ಟಿ ದೇವಸ್ಥಾನದ ಎದುರು ಬಸ್‌ಬೇ ಮತ್ತು ರಸ್ತೆ ಅಗಲೀಕರಣಕ್ಕಾಗಿ ಅಗೆದು ಹಾಕಲಾಗಿದೆಯಾದರೂ ಈವರೆಗೆ ಚರಂಡಿ ನಿರ್ಮಾಣವಾಗಿಲ್ಲ. ಹೀಗಾಗಿ ಇಲ್ಲಿಯೂ ರಾಷ್ಟ್ರೀಯ ಹೆದ್ದಾರಿಯಲ್ಲಿಯೆ ಮಳೆ ನೀರು ಹರಿಯುವುದರಿಂದ ಸಂಚಾರಕ್ಕೆ ತೊಡಕಾಗಿದ್ದು ಸಾರ್ವಜನಿಕರಿಗೂ ತೊಂದರೆಯಾಗಿ ಪರಿಣಮಿಸಿದೆ.

ಕಾಮಾಜೆ: ಸಮಗ್ರ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯಿಂದ ಕಾಮಾಜೆ ರಸ್ತೆಯ ವಿವಿಧೆಡೆ ಸಂಪೂರ್ಣ ಕೆಸರುಮಯವಾಗಿದೆ. ಕೆಲವು ಕಡೆಗಳಲ್ಲಿ ಡಾಂಬರು ಸಂಪೂರ್ಣ ಕಿತ್ತುಹೋಗಿದ್ದು, ವಾಹನ ಸಂಚಾರದೊಂದಿಗೆ ನಡೆದಾಡುವುದು ದುಸ್ಥರವಾಗಿ ಮಾರ್ಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News