×
Ad

ನಾಗಾ ಬಂಡುಗೋರ ಸಂಘಟನೆ ಮುಖ್ಯಸ್ಥ ಶಂಗ್‌ವಾಂಗ್ ಖಪ್ಲಾಂಗ್ ನಿಧನ

Update: 2017-06-10 19:09 IST

ಗುವಾಹಟಿ, ಜೂ.10: ಬಂಡುಗೋರ ಮುಖಂಡನಾಗಿ ಅರ್ಧ ಶತಮಾನದಷ್ಟು ಕಾಲ ಭೂಗತರಾಗಿ ಕಾರ್ಯ ನಿರ್ವಹಿಸಿದ್ದ, ಭೂಗತ ನಾಗಾ ಬಂಡುಕೋರರ ಸಂಘಟನೆ ಎನ್‌ಎಸ್‌ಸಿಎನ್(ಕೆ) ಮುಖ್ಯಸ್ಥ, ‘ಮೋಸ್ಟ್ ವಾಂಟೆಡ್’ ಬಂಡುಗೋರ ಮುಖಂಡ ಶಂಗ್‌ವಾಂಗ್ ಶಂಗ್ಯುಂಗ್ ಖಪ್ಲಾಂಗ್ (77 ವರ್ಷ) ಸುದೀರ್ಘಕಾಲದ ಅಸೌಖ್ಯದಿಂದ ಮ್ಯಾನ್ಮಾರ್‌ನ ಸಗ್‌ಯಿಂಗ್ ವಿಭಾಗದ ಟಾಗ ಎಂಬಲ್ಲಿರುವ ಸಂಘಟನೆಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಸಂಜೆ ಮೃತಪಟ್ಟಿರುವುದಾಗಿ ವರದಿಯಾಗಿದೆ.

   ನಾಗಾಲ್ಯಾಂಡ್ ರಾಜ್ಯ, ಅರುಣಾಚಲ ಪ್ರದೇಶದ ಕೆಲವು ಭಾಗ ಮತ್ತು ಮ್ಯಾನ್ಮಾರ್‌ನ ಕೆಲ ಪ್ರದೇಶಗಳಲ್ಲಿ ‘ಪರ್ಯಾಯ ಸರಕಾರ’ ನಡೆಸುತ್ತಿದ್ದ ಪೀಪಲ್ಸ್ ರಿಪಬ್ಲಿಕ್ ಆಫ್ ನಾಗಾಲಿಮ್(ಜಿಪಿಆರ್‌ಎನ್)ನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಖಪ್ಲಾಂಗ್,ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರು. ಇವರಿಗೆ ಮೂವರು ಪುತ್ರರು ಮತ್ತು ಓರ್ವ ಪುತ್ರಿಯಿದ್ದು ಇವರೆಲ್ಲಾ ಬಂಡುಗೋರ ಜೀವನದಿಂದ ದೂರ ಉಳಿದಿದ್ದರು.

ಈಶಾನ್ಯ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಂಡುಗೋರ ಗುಂಪುಗಳ ಏಕೀಕೃತ ಸಂಘಟನೆ ರೂಪಿಸುವಲ್ಲಿ ಖಪ್ಲಾಂಗ್ ರೂವಾರಿಯಾಗಿದ್ದರು. ಇವರ ಪ್ರಯತ್ನದಿಂದ ‘ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ವೆಸ್ಟರ್ನ್ ಸೌತ್‌ಏಶ್ಯಾ’ (ಯುಎನ್‌ಎಲ್‌ಎಫ್‌ಡಬ್ಲುಎಸ್‌ಎ) ಅಸ್ತಿತ್ವಕ್ಕೆ ಬಂದಿದ್ದು ಈ ಸಂಘಟನೆ ಕಳೆದ ಕೆಲ ವರ್ಷಗಳಿಂದ ದೇಶದ ಈಶಾನ್ಯ ರಾಜ್ಯಗಳಲ್ಲಿ ಭದ್ರತಾ ಪಡೆಗಳ ವಿರುದ್ಧ ಹಲವು ದಾಳಿಗಳನ್ನು ನಡೆಸಿದೆ.

 ಓರ್ವ ಪ್ರಭಾವೀ ಬಂಡುಗೋರ ಮುಖಂಡನಾಗಿದ್ದ ಖಪ್ಲಾಂಗ್, ಮ್ಯಾನ್ಮಾರ್‌ನ ಅಧಿಕಾರ ವರ್ಗ ಹಾಗೂ ಚೀನಾದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅಲ್ಲದೆ ದಕ್ಷಿಣ ಏಶ್ಯಾದ ಕೆಲ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದು ಇವರ ಮರಣವು ಈಶಾನ್ಯ ರಾಜ್ಯಗಳಲ್ಲಿ ಸಕ್ರಿಯವಾಗಿರುವ ಬಂಡುಗೋರ ಸಂಘಟನೆಗೆ ಭಾರೀ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ಎನ್‌ಎಸ್‌ಸಿಎನ್ ಉಪಾಧ್ಯಕ್ಷ ಖಾಂಗೊ ಕೊನ್ಯಾಕ್ ಸಂಘಟನೆಯ ನೂತನ ಅಧ್ಯಕ್ಷರಾಗಲಿದ್ದಾರೆ ಎಂದು ಸಂಘಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News