×
Ad

ಹಿರಿಯ ನಾಗರಿಕರಿಗೆ ಸುರಕ್ಷಾ ಕೈಪಟ್ಟಿ ವಿನ್ಯಾಸ

Update: 2017-06-10 19:39 IST

ಉಡುಪಿ, ಜೂ.10: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಗಣಕಯಂತ್ರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕೇವಲ್ ಜೈನ್, ಕಾರ್ತಿಕ್ ನಾಯಕ್, ಅಶ್ವಿನ್ ಕೆ. ಮತ್ತು ಗೌತಮ್ ಶೆಟ್ಟಿ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಶಿಜು ವಿ.ಸೋಮನ್ ಮಾರ್ಗದರ್ಶನದಲ್ಲಿ ಹಿರಿಯ ನಾಗರಿಕರಿಗೆ ಅಂತರ್ಜಾಲ ಆಧಾರಿತವಾದ ಕೈಪಟ್ಟಿ ಯೊಂದನ್ನು ವಿನ್ಯಾಸಗೊಳಿಸಿದ್ದಾರೆ.

ದೈಹಿಕವಾಗಿ ಅಶಕ್ತರಾಗಿರುವವರು ಬಳಸಬಹುದಾದ ಈ ಕೈಪಟ್ಟಿ, ಅವರು ಸುಲಲಿತ ಬದುಕನ್ನು ಜೀವಿಸುವ ಅವಕಾಶ ಕಲ್ಪಿಸುವುದಲ್ಲದೇ ಅವರ ಪರಾವಲಂಬನೆಯನ್ನು ಕಡಿಮೆಗೊಳಿಸುತ್ತದೆ. ಈ ಕೈಪಟ್ಟಿಯನ್ನು ಧರಿಸಿಕೊಂಡು ವ್ಯಕ್ತಿಯು ವಿದ್ಯುತ್ ಉಪಕರಣಗಳನ್ನು ನಿಯಂತ್ರಿಸಬಹುದು. ತುರ್ತು ಪರಿಸ್ಥಿತಿಯಲ್ಲಿ ತನ್ನ ಸಂಬಂಧಿಕರಿಗೆ ಅಥವಾ ತನ್ನ ಸಹಾಯಕರಿಗೆ ಸಂದೇಶವನ್ನು ಕಳುಹಿಸುವ ವ್ಯವಸ್ಥೆಯು ಇದರಲ್ಲಿದೆ. ಅಶಕ್ತರನ್ನು ನೋಡಿಕೊಳ್ಳುತ್ತಿರುವವರಿಗಾಗಿಯೂ ಒಂದು ಆಂಡ್ರಾಯ್ಡಾ ಆ್ಯಪ್‌ನ್ನು ಸಂರಚಿಸಿರುವ ವಿದ್ಯಾರ್ಥಿಗಳು ಇದರ ಮೂಲಕ ತನ್ನ ಕಾರ್ಯ ಕ್ಷೇತ್ರದಿಂದಲೇ ಆಪ್ತರ ಚಲನವಲನಗಳನ್ನು ಅವಲೋಕಿಸುವ ಅವಕಾಶ ಕಲ್ಪಿಸಿದ್ದಾರೆ.

ಇದಲ್ಲದೇ ತಾನಿರುವ ಕಡೆಯಿಂದಲೇ ಅಶಕ್ತರಿರುವ ಕೋಣೆಯ ವಿದ್ಯುತ್ ಉಪಕರಣಗಳನ್ನು ನಿಯಂತ್ರಿಸುವ, ಅವರಿಗೆ ಹೊತ್ತು ಹೊತ್ತಿಗೆ ಔಷಧಿಗಳನ್ನು ತೆಗೆದುಕೊಳ್ಳಲು ನೆನಪಿಸುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ಉಪಕರಣ ದಲ್ಲಿ ಅಳವಡಿಸಿರುವ ಗ್ರಾಹಕಗಳು ಎಲ್ಲ ಚಲನವಲನವನ್ನು ಗ್ರಹಿಸಿ ತಲುಪ ಬೇಕಾದವರಿಗೆ ತಲುಪಿಸುವ ಮಧ್ಯವರ್ತಿ ಕೆಲಸವನ್ನು ನಿರ್ವಹಿಸುತ್ತವೆ. ರಾಸ್ಬೆರಿ ಪೈಯ ಅಳವಡಿಕೆ, ಉಪಕರಣ ಮತ್ತು ದೂರದಲ್ಲಿರುವ ಆಪ್ತರ ನಡುವಿನ ಅಂತರ್ಜಾಲ ಸಂಪರ್ಕಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ ಎನ್ನುತ್ತಾರೆ ಸಂಶೋಧನಾ ವಿದ್ಯಾರ್ಥಿಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News