×
Ad

ಒಳಚರಂಡಿ ಯೋಜನೆ ಕಾಮಗಾರಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಎಸಿಗೆ ಮನವಿ

Update: 2017-06-10 19:45 IST

ಕುಂದಾಪುರ, ಜೂ.10: ಕುಂದಾಪುರ ಪುರಸಭೆ ವ್ಯಾಪ್ತಿಯೊಳಗೆ ಉದ್ದೇಶಿತ ಒಳಚರಂಡಿ ಯೋಜನೆಯ ಕಾಮಗಾರಿಯಿಂದ ಉಂಟಾಗುವ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಕುಂದಾಪುರ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಕುಂದಾಪುರ ಸಹಾಯಕ ಕಮೀಷನರ್ ಶಿಲ್ಪನಾಗ್ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಲಾಯಿತು.

ಈ ಯೋಜನೆಯಿಂದಾಗಿ ಕುಂದಾಪುರ ಕಸಬಾ, ವಡೇರಹೋಬಳಿ ಪ್ರದೇಶದ ಫಲವತ್ತಾದ ಕೃಷಿಭೂಮಿಯಲ್ಲಿ ಪೈಪ್‌ಲೈನ್ ಹಾದು ಹೋಗುವುದಲ್ಲದೆ ಅಂತಿಮವಾಗಿ ಸ್ಥಳೀಯ ನಿವಾಸಿಗಳು ವಾಸವಾಗಿರುವ ಪ್ರದೇಶದಲ್ಲೇ ಶುದ್ಧಿ ಕರಣ ಘಟಕ ಮಾಡುವುದರಿಂದ ಈ ಪ್ರದೇಶದ ನಾಗರಿಕರಿಗೆ ಆತಂಕ ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿ ಸ್ವೀಕರಿಸಿ ಮಾತನಾಡಿದ ಶಿಲ್ಪಾನಾಗ್, ಒಳಚರಂಡಿ ಯೋಜನೆ ಕಾಮಗಾರಿಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು, ಪುರಸಭಾ ಮುಖ್ಯಾಧಿಕಾರಿ ಸೇರಿದಂತೆ ಹೋರಾಟ ಸಮಿತಿಯ ಮುಖಂಡರೊಡನೆ ಜಂಟಿ ಸಭೆ ಕರೆಯಲಾಗುವುದು. ಸಮಸ್ಯೆಗಳ ಬಗ್ಗೆ ಒಮ್ಮತದ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು. ಅಲ್ಲಿಯವರೆಗೆ ಯೋಜನೆಯ ಕಾಮಗಾರಿ ಕೆಲಸ ನಿಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

ನಿಯೋಗದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ವಿ.ನರಸಿಂಹ, ಸದಸ್ಯೆ ಗುಣರತ್ನ, ರಾಘವೇಂದ್ರ ದೇವಾಡಿಗ, ಶಿವ ಮೆಂಡನ್, ನಿತ್ಯಾನಂದ ಹವಾಲ್ದಾರ್, ಎಚ್. ನರಸಿಂಹ, ಸುರೇಶ ಕಲ್ಲಾಗರ, ಮಹಾಬಲ ವಡೇರಹೋಬಳಿ, ಕೃಷ್ಣ ಪೂಜಾರಿ, ರಾಜೇಶ್ ವಡೇರ ಹೋಬಳಿ, ಪುಂಡಲೀಕ, ವಾಸುದೇವ, ವಿನೋಧ, ವೆಂಕಟೇಶ ಕೋಣಿ ಮೊದಲಾದವರು ಉಪಸ್ಥಿತರಿದ್ದರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News