×
Ad

ರಮಝಾನ್ ನಲ್ಲಿ ಉಪವಾಸವಿದ್ದು, ಮುಸ್ಲಿಮರಿಗೆ ಸಾಥ್ ನೀಡುವ ಹಳೆದಿಲ್ಲಿಯ ಹಿಂದೂಗಳು

Update: 2017-06-10 19:50 IST

ದಿಲ್ಲಿ, ಜೂ.10: ರಮಝಾನ್ ಮುಸ್ಲಿಮರ ಪಾಲಿನ ಪವಿತ್ರ ತಿಂಗಳಾಗಿದ್ದು, ಎಲ್ಲಾ ಮುಸ್ಲಿಮರು ವ್ರತಾಚರಣೆ, ಪ್ರಾರ್ಥನೆಯಲ್ಲಿ ಸದಾ ನಿರತರಾಗಿರುತ್ತಾರೆ. ಈ ನಡುವೆ ಹೊಟ್ಟೆಹೊರೆಯಬೇಕಾದ ಅನಿವಾರ್ಯತೆಯಿಂದ ವ್ರತಾಚರಣೆಯ ನಡುವೆಯೂ ಕೆಲಸಕ್ಕೆ ಹೋಗಬೇಕಾಗುತ್ತದೆ. ದೇಶದ ಇತರ ಭಾಗಗಳಿಗೆ ಹೋಲಿಸಿದೆ ಹಳೆದಿಲ್ಲಿಯ ಹಿಂದೂ ಮುಸ್ಲಿಮರ ನಡುವಿನ ಕೋಮು ಸಾಮರಸ್ಯ ವಿಶಿಷ್ಟವಾದದು. ಇಲ್ಲಿನ ಬಹುತೇಕ ಹಿಂದೂಗಳು ತಮ್ಮ ಜೊತೆಗೆ ಕೆಲಸ ಮಾಡುವವರು ಅಥವಾ ಮಾಲಕರು ವ್ರತಾಚರಣೆಯಲ್ಲಿದ್ದರೆ ಅವರೂ ಇಡೀ ದಿನ ಏನೂ ತಿನ್ನದೆ ಮುಸ್ಲಿಮರಿಗೆ ಸಾಥ್ ನೀಡುತ್ತಾರೆ.

“16 ವರ್ಷಗಳಿಂದ ನಮ್ಮ ಜೊತೆ ಕೆಲಸ ಮಾಡುತ್ತಿರುವ ಕೌಶಲ್ ಸಿಂಗ್ ರಮಝಾನ್ ನ ಹಗಲು ಹೊತ್ತಿನಲ್ಲಿ ಏನನ್ನೂ ತಿನ್ನುವುದಿಲ್ಲ. ಕೌಶಲ್ ನಂತೆಯೇ ನಮ್ಮ ಜೊತೆಗಿರುವ ಹಲವು ಹಿಂದೂ ಕೆಲಸಗಾರರು ಇಡೀ ದಿನ ನಮಗೆ ಬೆಂಬಲವಾಗಿ ನಿಲ್ಲುತ್ತಾರೆ. ಮಧ್ಯಾಹ್ನದ ಊಟ ಮಾಡದ ಅವರು ನೀರು ಸಹ ಕುಡಿಯುವುದಿಲ್ಲ.  ಒಂದು ವೇಳೆ ಅವರಿಗೂ ತೀವ್ರ ಹಸಿವಾದಲ್ಲಿ ಹಿಂಬದಿಗೆ ಹೋಗಿ ನಮಗೆ ಕಾಣದಂತೆ ಆಹಾರ ಸೇವಿಸುತ್ತಾರೆ” ಎನ್ನುತ್ತಾರೆ ಕಲ್ಲಾನ್ ಸಿಹಿತಿಂಡಿಯ ಮಾಲಕ ಮುಹಮ್ಮದ್ ಶಾನ್.

ಈ ಬಗ್ಗೆ ಪ್ರತಿಕ್ರಿಯಿಸುವ ಕೌಶಲ್ , ಇದು ಧರ್ಮಗಳ ವಿಚಾರವಲ್ಲ. ಬದಲಾಗಿ, ಮಾನವೀಯತೆಯ ವಿಚಾರವಾಗಿದೆ. ನನ್ನ ಜೊತೆಗಾರರು ಆಹಾರಗಳನ್ನು ತ್ಯಜಿಸಿ ಉಪವಾಸದಲ್ಲಿರುವಾಗ ನಾನು ಹೇಗೆ ತಿನ್ನಲು, ಕುಡಿಯಲು ಸಾಧ್ಯ. ನಾನು ಎಲ್ಲಾ ಧರ್ಮಗಳನ್ನು ಹಾಗೂ ಅವುಗಳ ಮೌಲ್ಯಗಳನ್ನು ಗೌರವಿಸುತ್ತೇನೆ” ಎನ್ನುತ್ತಾರೆ,

ಹಳೆ ದಿಲ್ಲಿ ವ್ಯಾಪ್ತಿಯ ಅನೇಕ ಅಂಗಡಿಗಳಲ್ಲಿ ಇಂತಹ ಕಥೆಗಳು ಸಿಗುತ್ತವೆ. ಇಲ್ಲಿ ಬಹುತೇಕ ಹಿಂದೂ ಕಾರ್ಮಿಕರಿದ್ದು, ಮುಸ್ಲಿಮರ ಆಚರಣೆಯನ್ನು ಗೌರವಿಸುತ್ತಾರೆ. ಈ ಬಗ್ಗೆ ವಿವರಿಸುವ ಮುಹಮ್ಮದ್ ಅರ್ಷದ್, ನನ್ನ ಅಂಗಡಿಯಲ್ಲಿ ಕೆಲಸ ಮಾಡುವ ಮೇವಾ ರಾಮ್ ನನ್ನ ಮುಂದೆ ಆಹಾರದ ಹೆಸರು ಕೂಡ ಹೇಳುವುದಿಲ್ಲ. ನನ್ನ ಕುಟುಂಬಸ್ಥರ ಜೊತೆ ಇಫ್ತಾರ್ ನಲ್ಲಿ ಭಾಗವಹಿಸುವ ಸಲುವಾಗಿ ಆತ ಮಧ್ಯಾಹ್ನದ ಊಟ ಕೂಡ ಮಾಡುವುದಿಲ್ಲ” ಎನ್ನುತ್ತಾರೆ,

ವ್ರತಾಚರಣೆಯ ಸಂದರ್ಭ ಮುಸ್ಲಿಮರು ಕಡಿಮೆ ಕೆಲಸ ಮಾಡುವಂತೆಯೂ ತಮ್ಮ ಕೆಲಸಗಳನ್ನು ನಾವು ಮಾಡುತ್ತೇವೆ ಎಂದು ಇಲ್ಲಿನ ಹಿಂದೂಗಳು ಹೇಳುತ್ತಾರೆ. “ರಮಝಾನ್ ನಲ್ಲಿ ಮುಸ್ಲಿಮರು ವಿಶ್ರಾಂತಿ ತೆಗೆದುಕೊಳ್ಳುವಂತೆಯೂ ನನ್ನ ಸಹೋದ್ಯೋಗಿಗಳಾದ ಹಿಂದೂಗಳು ಕೆಲಸ ಕಾರ್ಯಗಳನ್ನು ಅವರು ನೋಡಿಕೊಳ್ಳುವುದಾಗಿಯೂ ಹೇಳುತ್ತಾರೆ” ಎಂದು ಹೇಳುತ್ತಾರೆ ಅರ್ಷದ್.

ಮೇವಾ ರಾಮ್ ಹೇಳುವಂತೆ ಹಳೆಯ ದಿಲ್ಲಿ ಭಾರತದ ಅತ್ಯಂತ ಜಾತ್ಯಾತೀತ ಪ್ರದೇಶವಾಗಿದೆ. “ಜಾಮಿಯಾ ಮಸೀದಿ ಮುಂಭಾಗದಲ್ಲಿರುವ ಚೌಕ ಜಾತ್ಯಾತೀತ ಚೌಕವೆಂದೇ ಹೆಸರುವಾಸಿಯಾಗಿದೆ. ಈದ್, ದೀಪಾವಳಿ, ಹೋಲಿ ಸೇರಿದಂತೆ ಎಲ್ಲಾ ಹಬ್ಬಗಳನ್ನು ನಾವಿಲ್ಲಿ ಆಚರಿಸುತ್ತೇವೆ. ಈದ್ ಹಾಗೂ ದೀಪಾವಳಿ ನಮ್ಮನ್ನು ಒಗ್ಗೂಡಿಸುತ್ತದೆ. ಒಗ್ಗಟ್ಟಾಗಿ ಕೆಲಸ ಮಾಡುವ ನಾವು ಯಾಕೆ ಹಬ್ಬ ಆಚರಿಸಬಾರದು” ಎಂದು ಪ್ರಶ್ನಿಸುತ್ತಾರೆ ಮೇವಾ ರಾಮ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News