ಬಿಜೆಪಿ ಸುಳ್ಯ ಮಂಡಲ ಕಾರ್ಯಕಾರಿಣಿ ಸಭ

Update: 2017-06-10 14:32 GMT

 ಕಡಬ, ಜೂ.10. ಬಿಜೆಪಿ ಕಾರ್ಯಕರ್ತರು ಅಧಿಕಾರದ ಆಸೆಯಿಲ್ಲದೆ ಪಕ್ಷದ ವಿಚಾರಗಳಿಗೆ ಮಹತ್ವ ನೀಡಿ ಸಂಘಟನೆ ಮೂಲಕ ಪಕ್ಷ ಬೆಳೆಸುತ್ತಿದ್ದಾರೆ. ಅಧುನಿಕ ತಂತ್ರಜ್ಞಾನ ಮೂಲಕ ಕಾರ್ಯಕರ್ತರು ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಸುಳ್ಯ ಶಾಸಕ ಎಸ್. ಅಂಗಾರ ಹೇಳಿದರು.

ಅವರು ಕೇಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಸಭಾಭವನದಲ್ಲಿ ನಡೆದ ಬಿಜೆಪಿ ಸುಳ್ಯ ಮಂಡಲ ಕಾರ್ಯಕಾರಿಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಚಾರಕ್ಕೆ ಒತ್ತು ಕೊಡುವ ಸರಕಾರ ನಮ್ಮನ್ನಾಳುತ್ತಿದೆ. ಅಭಿವೃದ್ದಿಯೆನ್ನುವುದು ರಾಜ್ಯದಲ್ಲಿ ಮರೀಚಿಕೆಯಾಗಿದೆ. ಅಭಿವೃದ್ದಿಯ ದೂರದೃಷ್ಟಿಯಿಲ್ಲದೆ ಕೇವಲ ಓಟು ಬ್ಯಾಂಕಿಗಾಗಿ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಕಾಂಗ್ರೆಸ್ ಸರಕಾರ ಸಫಲವಾಗಿದೆ. ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್‌ನ್ನು ಮುಂದಿನ ಚುನಾವಣೆಯಲ್ಲಿ ಜನ ತಿರಸ್ಕರಿಸುತ್ತಾರೆ. ಸರಕಾರ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿರುವುದರಿಂದ ಅಭಿವೃದ್ದಿಗೆ ಹಿನ್ನಡೆಯಾಗಿದೆ. ಕೇಂದ್ರದ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರಕಾರಗಳ ಜನಪರ ಯೋಜನೆಗಳನ್ನು ಜನತೆಗೆ ಮನದಟ್ಟು ಮಾಡುವ ಮೂಲಕ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಸರಕಾರ ರಚಿಸುವಲ್ಲಿ ಕಾರ್ಯಕರ್ತರ ಶ್ರಮ ಅಗತ್ಯವಾಗಿದೆ ಎಂದರು.

 ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ಸಾಮನ್ಯ ಕಾರ್ಯಕರ್ತನಿಗೆ ಪಕ್ಷ ಸಂಘಟನೆಗೆ ಪ್ರೇರಣೆ ನೀಡುವುದು ಕಾರ್ಯಕಾರಣಿಯ ಉದ್ದೇಶವಾಗಿದೆ. ಬಿಜೆಪಿಯಲ್ಲಿ ಸಮರ್ಪಣಾ ಭಾವದಿಂದ ಪಕ್ಷಕ್ಕಾಗಿ ಹಗಲಿರುಳು ದುಡಿಯುವ ಕಾರ್ಯಕರ್ತರಿದ್ದಾರೆ. ರಾಷ್ಟ್ರದ ಚಿಂತನೆ, ಪಕ್ಷದ ಬೆಳವಣಿಗೆಯ ಬಗ್ಗೆ ಒತ್ತು ನೀಡಲಾಗಿದೆ. ಹೀಗಾಗಿ ಪ್ರಸಕ್ತ ಜಗತ್ತಿನಲ್ಲಿ ನಂ.1 ಪಕ್ಷವಾಗಿ ಮುನ್ನಡೆಯುತ್ತಿದೆ.

ಬಿಜೆಪಿಗೆ ದೇಶದಲ್ಲಿ 12 ಕೋಟಿ ಕಾರ್ಯಕರ್ತರಿದ್ದಾರೆ. ಚೀನಾದ ಕಮ್ಯನಿಷ್ಟ್ ಪಕ್ಷ ಎರಡನೆ ಸ್ಥಾನದಲ್ಲಿದೆ. 50 ವರ್ಷಗಳಿಂದ ನಮ್ಮನ್ನಾಳಿದ ಕಾಂಗ್ರೆಸ್ಸನ್ನು ಜನ ತಿರಸ್ಕರಿಸಿ ಬಿಜೆಪಿಗೆ ಅಧಿಕಾರ ನೀಡಿದ್ದಾರೆ. ನರೇದ್ರ ಮೋದಿಯ ಸಮರ್ಥ ನಾಯಕತ್ವದ ಆಡಳಿತದಿಂದ ದೇಶ ಸೂಪರ್ ಪವರ್ ಆಗಿ ಬದಲಾವಣೆಯಾಗುತ್ತಿದೆ. ರಾಜ್ಯದಲ್ಲಿ ಆಡಳಿತ ನಡೆಸುವ ಸಿದ್ದರಾಮಯ್ಯ ನೇತೃತ್ವದ ಸರಕಾರ ಹಗರಣಗಳ ಸರಮಾಲೆಯಲ್ಲಿ ಬಿದ್ದು ಒದ್ದಾಡುತ್ತಿದೆ. ರಾಜ್ಯವನ್ನು ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದರು.

 ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಮೂಡಬಿದ್ರೆ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷರಾದ ಜಗದೀಶ ಅಧಿಕಾರಿ, ಭಾಗಿರಥಿ, ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ಶಿರಾಡಿ, ಪ್ರಕಾಶ್ ಹೆಗ್ಡೆ ಉಪಸ್ಥಿತರಿದ್ದರು.

ಈ ಸಂದರ್ಭ ಸುಳ್ಯ ಎಪಿಎಂಸಿ ಅಧ್ಯಕ್ಷ ದೇರಣ್ಣ ಗೌಡ, ಉಪಾಧ್ಯಕ್ಷೆ ಸುಕಾನ್ಯ ಭಟ್, ಪುತ್ತೂರು ಎಪಿಎಂಸಿ ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು ಅವರನು ಗೌರವಿಸಲಾಯಿತು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಆಶಾತಿಮ್ಮಪ್ಪ ಗೌಡ ವಂದೆಮಾತರಂ ಹಾಡಿದರು. ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಸ್ವಾಗತಿಸಿದರು. ಕಡಬ ಶಕ್ತಿ ಕೇಂದ್ರ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್ ವಂದಿಸಿದರು. ಶಿವಪ್ರಸಾದ್ ಮೈಲೇರಿ, ಲಕ್ಷ್ಮೀ ನಾರಾಯಣ ರಾವ್ ಆತೂರು ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News