×
Ad

ಸಾಗರಗಳ ರಕ್ಷಣೆಗೆ ತುರ್ತು ಕ್ರಮ: ವಿಶ್ವಸಮುದಾಯದ ಒಕ್ಕೊರಲ ಕರೆ

Update: 2017-06-10 20:26 IST

ವಿಶ್ವಸಂಸ್ಥೆ,ಜೂ.10: ಜಗತ್ತಿನ ಸಾಗರಗಳ ಆರೋಗ್ಯ ಹಾಗೂ ಉತ್ಪಾದನಾಶೀಲತೆಯಲ್ಲಿ ಉಂಟಾಗಿರುವ ಕುಸಿತವನ್ನು ತಡೆಗಟ್ಟಲು ತುರ್ತಾಗಿ ಕಾರ್ಯಪ್ರವೃತ್ತವಾಗುವಂತೆ ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು ಶುಕ್ರವಾರ ತುರ್ತು ಕರೆಯನ್ನು ನೀಡಿವೆ. ಸಾಗರಗಳ ರಕ್ಷಣೆ ಕುರಿತ ಕ್ರಿಯಾ ಯೋಜನೆಯನ್ನು ಅಮೆರಿಕ ಬೆಂಬಲಿಸಿದೆಯಾದರೂ,ಹವಾಮಾನ ಬದಲಾವಣೆ ನಿಯಂತ್ರಣ ಕುರಿತ ಪ್ಯಾರಿಸ್ ಒಡಂಬಡಿಕೆಯನ್ನು ಬೆಂಬಲಿಸಲು ಅದು ನಿರಾಕರಿಸಿದೆ. ಸಾಗರಗಳ ಕುರಿತು ವಿಶ್ವಸಂಸ್ಥೆ ಪ್ರಪ್ರಥಮ ಬಾರಿಗೆ ಆಯೋಜಿಸಿದ್ದ ಈ ಸಮಾವೇಶದ ಕೊನೆಗೆ ಅಂಗೀಕರಿಸಲಾದ ಅಂತಿಮ ಒಡಂಬಡಿಕೆಗೆ ಸದಸ್ಯ ರಾಷ್ಟ್ರಗಳು ಅವಿರೋಧವಾಗಿ ಅನುಮೋದಿಸಿದಾಗ ಉಪಸ್ಥಿತರಿದ್ದ ರಾಜತಾಂತ್ರಿಕರು ಹಾಗೂ ಸಚಿರುಗ ಹರ್ಷೋದ್ಘಾರದೊಂದಿಗೆ ಕರತಾಡನಗೈದರು.

  ಪ್ಲಾಸ್ಟಿಕ್ ತ್ಯಾಜ್ಯ, ಅಕ್ರಮ ಹಾಗೂ ಮಿತಿ ಮೀರಿದ ಮೀನುಗಾರಿಕೆ, ಚಿಕ್ಕಪುಟ್ಟ ದ್ವೀಪಗಳ ಮುಳುಗಡೆಗೆ ಕಾರಣವಾಗುವ ಸಮುದ್ರಮಟ್ಟದಲ್ಲಿನ ಏರಿಕೆ ಹಾಗೂ ಸಮುದ್ರ ನೀರಿನಲ್ಲಿ ಆಮ್ಲೀಯತೆಯ ಮಿಶ್ರಣದಿಂದಾಗಿ ಸಮುದ್ರಜೀವಿಗಳ ನಾಶ ಇತ್ಯಾದಿ ಬೆದರಿಕೆಗಳನ್ನು ಎದುರಿಸಲು ಜಗತ್ತಿನಾದ್ಯಂತದ ಜನತೆ ಹಾಗೂ ಸಂಘಟನೆಗಳು ತಕ್ಷಣವೇ ಕಾರ್ಯಪ್ರವೃತ್ತವಾಗಬೇಕೆಂದು ಸಮಾವೇಶ ಕರೆ ನೀಡಿದೆ.

    ಸಾಗರಗಳ ರಕ್ಷಣೆಗೆ ಕಾರ್ಯಪ್ರವೃತ್ತವಾಗಬೇಕೆಂಬ ಕರೆಗೆ ಎಲ್ಲಾ ಸದಸ್ಯ ರಾಷ್ಟ್ರಗಳು ಅವಿರೋಧವಾಗಿ ಅನುಮೋದನೆ ನೀಡಿದರೂ, ಕಾರ್ಯಯೋಜನೆಯಲ್ಲಿನ ಕೆಲವು ನಿರ್ದಿಷ್ಟ ನಿಯಮಾವಳಿಗಳಿಂದ ದೂರವುಳಿಯಲು ಈಜಿಪ್ಟ್ ಹಾಗೂ ರಶ್ಯ ಸರಕಾರಗಳು ನಿರ್ಧರಿಸಿದವು.ಸಮಾವೇಶದಲ್ಲಿ ಅಮೆರಿಕದ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಬ್ಲೇಟನ್ ಮಾತನಾಡಿ ಪ್ರಸಕ್ತ ಹಾಗೂ ಮುಂದಿನ ತಲೆಮಾರಿಗಾಗಿ ಸಾಗರಗಳ ರಕ್ಷಣೆ ಹಾಗೂ ಅವುಗಳ ಸುಸ್ಥಿರ ನಿರ್ವಹಣೆಯನ್ನು ಉತ್ತೇಜಿಸಲು ಹಾಗೂ ಸಮುದ್ರಗಳಿಗೆ ಎದುರಾಗಿರುವ ಬೆದರಿಕೆಯನ್ನು ಎದುರಿಸಲು ಅಮೆರಿಕವು ವಿಶ್ವಸಂಸ್ಥೆಯ ಜೊತೆಗೂಡಿ ಶ್ರಮಿಸಲಿದೆ ಎಂದರು.

ಸಮಾವೇಶವು ಯಶಸ್ವಿಯಾಗಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವ ವಿಶ್ವಸಂಸ್ತೆಯ ಮಹಾಧಿವೇಶನದ ಅಧ್ಯಕ್ಷ ಪೀಟರ್ ಥಾಮ್ಸನ್ ಅವರು, ಸಾಗರಗಳ ದುಸ್ಥಿತಿಯೆಡೆಗೆ ಸಾಗುತ್ತಿರುವುದು ತಮಗೆ ಅರಿವಿಲ್ಲವೆಂದು, ಈಗ ಯಾರೂ ಹೇಳಲಾರರು ಎಂದು ಅಭಿಪ್ರಾಯಿಸಿದರು.
   ಸಾಗರಗಳು ಸಮಗ್ರ ಮಾನವ ಕುಲದ ಪರಂಪರೆಯಾಗಿದ್ದು, ಅವುಗಳ ಆರೋಗ್ಯವನ್ನು ಮರುಸ್ಥಾಪಿಸುವ ಬಗ್ಗೆ ಈವರೆಗೆ ಯಾವುದೇ ಗಂಭೀರವಾದ ಪ್ರಯತ್ನಗಳು ನಡೆಯದಿರುವುದರ ಬಗ್ಗೆ ಯೂ ಥಾಮ್ಸನ್ ಅಚ್ಚರಿ ವ್ಯಕ್ತಪಡಿಸಿದರು.

ಸಾಗರಗಳು ಸಾವನ್ನಪ್ಪಿದಲ್ಲಿ ನಾವು ಸತ್ತಂತೆಯೇ ಸರಿ.ಸಮುದ್ರದ ವಿಷಯಕ್ಕೆ ಬರುವಾಗ ನಾವು ಅಥವಾ ಅವರು ಎಂಬ ಭೇದವಿರದು. ಅದು ನಮ್ಮೆಲ್ಲರಿಗೂ ಸೇರಿದ್ದಾಗಿದೆ.
-ಪೀಟರ್ ಥಾಮ್ಸನ್, ವಿಶ್ವಸಂಸ್ಥೆಯ ಸಾಮಾನ್ಯಸಭೆ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News