ಮಂಕುತಿಮ್ಮನ ಕಗ್ಗವು ಜೀವನಕ್ಕೆ ಹತ್ತಿರವಾದ ಕಾವ್ಯ: ನಟೇಶ್‌

Update: 2017-06-10 15:21 GMT

ಉಡುಪಿ, ಜೂ.10: ಮಂಕುತಿಮ್ಮನ ಕಗ್ಗವು ಜೀವನಕ್ಕೆ ಹತ್ತಿರವಾದ ಕಾವ್ಯ. ಪ್ರೀತಿಯನ್ನು ಬಿತ್ತರಿಸುವ ಕಾವ್ಯಗಳನ್ನು ವ್ಯವಸ್ಥಿತವಾಗಿ ಅಧ್ಯಯನ ನಡೆಸುವುದು ಕಡಿಮೆ ಆದ ಪರಿಣಾಮ ಇಂದು ಸಮಾಜದಲ್ಲಿ ಕಲಹಗಳು ಹೆಚ್ಚು ಹೆಚ್ಚು ನಡೆಯುತ್ತಿವೆ ಎಂದು ಶಿವಮೊಗ್ಗದ ಉಪನ್ಯಾಸಕ ಜಿ.ಎಸ್.ನಟೇಶ್ ಹೇಳಿದ್ದಾರೆ.

ಉಡುಪಿ ಸುಹಾಸಂ ವತಿಯಿಂದ ಉಡುಪಿ ಕಿದಿಯೂರು ಹೊಟೇಲಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಡಿವಿಜಿಯವರ ಮಂಕು ತಿಮ್ಮನ ಕಗ್ಗದ ಕುರಿತ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಲೇಖಕರ ನಂತರವೂ ಜನರ ಮಧ್ಯೆ ಆಳವಾಗಿ ನೆಲೆ ಕಾಣುವುದೇ ನಿಜವಾದ ಮಹಾಕಾವ್ಯ. ನಾವು ಮಾಡುವ ಕೆಲಸ ಪರಿಪೂರ್ಣವಾಗಿದ್ದರೆ ಅದೇ ನಮಗೆ ದೊಡ್ಡ ಶಕ್ತಿ. ಪ್ರಕೃತಿ ಹೇಳಿದಂತೆ ಬದುಕಿದರೆ ಮಾತ್ರ ಮನುಷ್ಯ ಶ್ರೇಷ್ಠ ಆಗಲು ಸಾಧ್ಯ. ಮನುಷ್ಯನನ್ನು ಬಿಟ್ಟರೆ ಬೇರೆ ಯಾವ ಪ್ರಾಣಿ ಪಕ್ಷಿಗಳು ಇನ್ನೊಬ್ಬರನ್ನು ಮೆಚ್ಚಿಸಲು ಕೆಲಸ ಮಾಡಲ್ಲ. ಪ್ರಕೃತಿ ಎಂದಿಗೂ ಧರ್ಮ ಬಿಟ್ಟು ಹೋಗಲ್ಲ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಮಂಕುತಿಮ್ಮನ ಕಗ್ಗವು ಅಮೂಲ್ಯ ವಾದ ಜೀವನ ಅನುಭವವನ್ನು ನೀಡುತ್ತದೆ. ಇಂದು ಮಂಕು ತಿಮ್ಮನ ಕಗ್ಗ ಶಾಲಾ ಪಠ್ಯಪುಸ್ತಕಗಳಿಂದ ಮಾಯವಾಗಿದೆ. ಮಕ್ಕಳಿಗೆ ಮೌಲ್ಯಗಳನ್ನು ತಿಳಿಸುವ ಕಗ್ಗವನ್ನು ಅಗತ್ಯವಾಗಿ ಪಠ್ಯ ಪುಸ್ತಕಗಳಲ್ಲಿ ಮತ್ತೆ ಸೇರಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಕಗ್ಗದಲ್ಲಿರುವ ಸಾರವನ್ನು ಅರ್ಥೈಸಿಕೊಂಡರೆ ಜೀವನ ಸುಗಮವಾಗಿ ಸಾಗಲು ಸಾಧ್ಯ. ಇವುಗಳಲ್ಲಿ ಜೀವನ ಉಲ್ಲಾಸಕ್ಕೆ ಬೇಕಾದ ಮಾರ್ಗದರ್ಶನ ಇದೆ. ತಾರ್ಕಿಕ ವಾಗಿ ಯೋಚಿಸುವುದರೊಂದಿಗೆ ಜ್ಞಾನ ಕಟ್ಟುವ ಕೆಲಸಕ್ಕೆ ಅನುವು ಮಾಡಿಕೊಡು ತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಮಂಗಳೂರು ಡಿವಿಜಿ ಬಳಗದ ಕನಕರಾಜು ಉಪಸ್ಥಿತರಿದ್ದರು. ಸುಹಾಸಂ ಅಧ್ಯಕ್ಷ ಎಚ್.ಶಾಂತರಾಜ ಐತಾಳ್ ಸ್ವಾಗತಿಸಿದರು. ಕಾರ್ಯದರ್ಶಿ ಎಚ್. ಗೋಪಾಲ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜತೆ ಕಾರ್ಯದರ್ಶಿ ಶ್ರೀನಿವಾಸ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News