ರಾಹುಲ್ ಬಂಧನ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ
ಉಡುಪಿ, ಜೂ.10: ಮದ್ಯಪ್ರದೇಶದಲ್ಲಿ ಗೋಲಿಬಾರ್‌ನಿಂದ ಮೃತಪಟ್ಟ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಲು ಹೋದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಬಂಧಿಸಿರುವ ಕ್ರಮವನ್ನು ವಿರೋಧಿಸಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿ ರೈಲು ರೋಕೋಗೆ ಯತ್ನಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಮಧ್ಯಪ್ರದೇಶದ ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ರೈಲ್ಪೆರೋಕೋ ನಡೆಸಲು ರೈಲು ನಿಲ್ದಾಣದ ಪ್ಲಾಟ್‌ಫಾರಂಗೆ ನುಗ್ಗಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದು ವಶಕ್ಕೆ ತೆಗೆದುಕೊಂಡರು. ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು.
ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಾತನಾಡಿ, ಮಧ್ಯಪ್ರದೇಶ ಸರಕಾರ ಈ ಕ್ರಮ ಖಂಡನೀಯ. ಅಲ್ಲಿಯ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್ ಮಾತನಾಡಿ, ಕೇಂದ್ರ ಬಿಜೆಪಿ ಸರಕಾರದ ಅಚ್ಛೇ ದಿನ್ ಆಶ್ವಾಸನೆ ವಿಫಲವಾಗಿ ರೈತರಿಗೆ ಬುರೇ ದಿನ್ ಗಳಾಗುತ್ತಿವೆ. ಯಡಿಯೂರಪ್ಪಮುಖ್ಯಮಂತ್ರಿ ಆಗಿದ್ದಾಗ ಹಾವೇರಿಯಲ್ಲಿ ಇದೇ ರೀತಿ ಗೋಲಿಬಾರ್ ರೈತರೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಇದೀಗ ಶಿವರಾಜ್ ಸಿಂಗ್ ಚೌಹಾನ್ ಮುಖ್ಯಮಂತ್ರಿಯಾಗಿರುವ ಮಧ್ಯಪ್ರದೇಶದಲ್ಲಿ ಗೋಲಿಬಾರ್ ನಡೆಸಿ 6 ಮಂದಿ ರೈತರನ್ನು ಹತ್ಯೆ ಮಾಡಲಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ವಿಘ್ನೇಶ್ ಕಿಣಿ, ಪ್ರಶಾಂತ್ ಪೂಜಾರಿ, ಪ್ರಕಾಶ್ ಶೆಟ್ಟಿ, ಕ್ರಿಷ್ಟೇನ್ ಅಲ್ಮೇಡಾ, ಪ್ರಶಾಂತ್ ಜತ್ತನ್ನ, ಪ್ರಭಾಕರ ಆಚಾರ್ಯ, ಮುಹಮ್ಮದ್ ಶರೀಫ್ ಹೆಜಮಾಡಿ, ಇಮ್ರಾನ್ ಕಾಪು, ನಿಯಾಝ್ ಪಡುಬಿದ್ರಿ ಮೊದಲಾದವರು ಉಪಸ್ಥಿತರಿದ್ದರು.