ಕಡಲ್ಕೊರೆತ ಸಂತ್ರಸ್ತರಿಗೆ ಗರಿಷ್ಠ ಪ್ರಮಾಣದ ಪರಿಹಾರಕ್ಕೆ ಯತ್ನ: ಸಚಿವ ಖಾದರ್

Update: 2017-06-10 15:37 GMT

ಮಂಗಳೂರು, ಜೂ.10: ಉಳ್ಳಾಲದ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಮೊನ್ನೆ ಉಳ್ಳಾಲದ ಕೈಕೋ ಎಂಬಲ್ಲಿ ಎರಡು ಮನೆಗಳು ಕಡಲ್ಕೊರೆತಕ್ಕೆ ಆಹುತಿಯಾಗಿದೆ. ಈ ಮನೆಯ ಸಂತ್ರಸ್ತರಿಗೆ ಗರಿಷ್ಠ ಪ್ರಮಾಣದ ಪರಿಹಾರ ನೀಡಲು ಪ್ರಯತ್ನಿಸಲಾಗುವುದು ಎಂದು ಸಚಿವ ಖಾದರ್ ತಿಳಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತ್ರಸ್ತೆ ನಫೀಸಾ ಕುಟುಂಬಸ್ಥರು ಇದೀಗ ಪಕ್ಕದ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಸೋಮೇಶ್ವರ, ಉಚ್ಚಿಲ, ಖಿಲರಿಯಾನಗರ, ಕೈಕೋ ಪ್ರದೇಶವು ಅಪಾಯದಿಂದ ಕೂಡಿದೆ. ಇಲ್ಲಿನ ಜನರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎಂದರು.

ಉಳ್ಳಾಲದಲ್ಲಿ ಕಡಲ್ಕೊರೆತ ತಡೆಗೆ ಮೂರು ಹೊಸ ಬರ್ಮ್ ಅಳವಡಿಕೆ ಮಾಡುವ ಆವಶ್ಯಕತೆಯಿದೆ. ಈ ಹಿನ್ನಲೆಯಲ್ಲಿ ಲೋಕೋಪಯೋಗಿ ಮತ್ತು ಬಂದರು ಇಲಾಖೆಯ ಜೊತೆ ಚರ್ಚೆ ನಡೆಸಲಾಗಿದೆ. ಕಾಮಗಾರಿಗೆ ಸಂಬಂಧಿಸಿ ಅನುದಾನ ಬಿಡುಗಡೆಗೊಳ್ಳಲಿದೆ ಎಂದು ಖಾದರ್ ಹೇಳಿದರು.

ಎಂಡೋ ಪರಿಹಾರ ಕೇರಳ ಮಾದರಿ ಬೇಡ: ಎಂಡೋ ಸಂತ್ರಸ್ತರಿಗೆ ಕೇರಳ ಮಾದರಿಯ ಪರಿಹಾರ ನೀಡುವ ಅಗತ್ಯವಿಲ್ಲ. ತಾನು ಆರೋಗ್ಯ ಸಚಿವನಾಗಿದ್ದಾಗ ಎಂಡೋ ಸಂತ್ರಸ್ತರಿಗೆ ಉತ್ತಮ ಪರಿಹಾರದ ಪ್ಯಾಕೆಜ್ ರೂಪಿಸಿದ್ದೆ. ಅದನ್ನೇ ಮುಂದುವರಿಸಬಹುದು. ಮಾಸಾಶನವನ್ನು ಹೆಚ್ಚಿಸಿದರೂ ಪರವಾಗಿಲ್ಲ, ಕೇರಳ ಮಾದರಿಯ ಪರಿಹಾರ ಬೇಡ. ಇದರಿಂದ ಹಣ ದುರುಪಯೋಗವಾಗುವ ಸಾಧ್ಯತೆ ಇದೆ. ಅಲ್ಲದೆ ಈ ಬೇಡಿಕೆಯನ್ನು ಮಂಡಿಸುವವರು ಎಂಡೋ ಸಂತ್ರಸ್ತರಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ ಎಂದು ಖಾದರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News