ಬಿರುಸಿನ ಮಳೆ: ಮನೆಗಳಿಗೆ ಹಾನಿ; ಸಂಚಾರಕ್ಕೆ ಅಡ್ಡಿ
ಮಂಗಳೂರು, ಜೂ. 10: ದ.ಕ. ಜಿಲ್ಲೆಯಾದ್ಯಂತ ಶನಿವಾರ ಬೆಳಗ್ಗೆಯಿಂದಲೇ ಬಿರುಸಿನ ಮಳೆಯಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳ ಪೈಕಿ ಮಂಗಳೂರಿನಲ್ಲಿ 54.1 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಮಳೆಯಿಂದಾಗಿ ಹಲವೆಡೆ ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿವೆ.
ಅಲ್ಲದೆ, ಕಲವೆಡೆ ಮರಗಳು ರಸ್ತೆಗುರುಳಿ ಸಂಚಾರಕ್ಕೆ ತೊಡಕಾಗಿರುವ ಬಗ್ಗೆಯೂ ವರದಿಯಾಗಿವೆ. ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ ಮಂಗಳೂರಿನಲ್ಲಿ ಅತೀ ಹೆಚ್ಚು ಮಳೆಯಾಗಿರುವುದು ವರದಿಯಾಗಿದೆ.
ಉಳಿದಂತೆ ಬಂಟ್ವಾಳ 33.5, ಬೆಳ್ತಂಗಡಿ 21.3, ಪುತ್ತೂರು 30.4 ಹಾಗೂ ಸುಳ್ಯ 20.0 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿವೆ.
ಮೂರು ಮನೆಗಳಿಗೆ ಹಾನಿಮಂಗಳೂರು ತಾಲೂಕಿನ ಬಜಾಲ್, ತೋಕೂರು, ಬೆಳ್ಮ ಗ್ರಾಮದಲ್ಲಿ ಮೂರು ಮನೆಗಳಿಗೆ ಹಾನಿ ಸಂಭವಿಸಿದೆ ಎಂದು ತಹಶೀಲ್ದಾರ್ ಮಹದೇವ ಅವರು ತಿಳಿಸಿದ್ದಾರೆ.
ಬಜಾಲ್‌ನಲ್ಲಿ ಮಿತ್ರಾ ಎಂಬವರ ಮನೆಯ ಕಾಂಪೌಂಡ್ ಕುಸಿದು ಮನೆಯ ಗೋಡೆಗೆ ಹಾನಿಯಾಗಿದೆ. ತೋಕೂರು ಅರಿಕೆರೆಯ ದಿ.ಮುಹಮ್ಮದ್ ಶಾಫಿ ಅವರ ಪತ್ನಿ ಫಾತುಮ ಎಂಬವರ ಮನೆಗೆ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ. ಬೆಳ್ಮ ಗ್ರಾಮದ ನಿತ್ಯಾನಂದ ನಗರದಲ್ಲಿ ಶಿವಪ್ಪ ಪೂಜಾರಿ ಎಂಬವರ ಪುತ್ರ ರಮೇಶ್ ಪೂಜಾರಿ ಎಂಬವರ ಮನೆಯ ಹತ್ತಿರದ ಗುಡ್ಡ ಕುಸಿದ ಪರಿಣಾಮ ಅವರ ಮನೆಗೆ ಭಾಗಶಃ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ರಸ್ತೆಗುರುಳಿದ ಮರ:
ಸಂಚಾರದಲ್ಲಿ ವ್ಯತ್ಯಯನಗರದ ಬಲ್ಮಠ ಜ್ಯೋತಿ ಸರ್ಕಲ್ ಬಳಿಯ ಕಾಲೇಜು ಕಾಂಪೌಂಡ್‌ನೊಳಗಿರುವ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡವಾಗಿ ಬಾಗಿದ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮಧ್ಯಾಹ್ನದ ಬಳಿಕ ಇದ್ದಕ್ಕಿದ್ದಂತೆ ಮರ ರಸ್ತೆಗೆ ಬಾಗಿದ್ದು, ಈ ಮಾರ್ಗವಾಗಿ ಸಂಚರಿಸುವ ಬಸ್ಸುಗಳ ಸಂಚಾರದಲ್ಲಿ ವ್ಯತ್ಯ ಉಂಟಾಗಿದೆ. ಅಲ್ಲದೆ ವಿಮಾನ ನಿಲ್ದಾಣ ರಸ್ತೆಯ ಮರಕಡ ಎಂಬಲ್ಲಿ ಮರವೊಂದು ರಸ್ತೆಗೆ ಉರುಳಿ ಬಿದ್ದ ಘಟನೆ ನಡೆದಿದೆ. ರಸ್ತೆಗೆ ಬಿದ್ದ ಪರಿಣಾಮ ಮರ ತುಂಡಾಗಿದ್ದು, ಈ ಮಾರ್ಗವಾಗಿ ಸಂಚರಿಸುವ ವಾಹನಗಳು ಕೆಲವು ಕಾಲ ಪರದಾಡ ಬೇಕಾಯಿತು.
ಏರ್‌ಪೋರ್ಟ್‌ಗೆ ಹೋಗುವ ಜನರ ಸಮಯದಲ್ಲಿ ವ್ಯತ್ಯಾಸ ಉಂಟಾಗಿದೆ. ಕೂಡಲೇ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಮಂಗಳೂರು ತಹಶೀಲ್ದಾರರು ತಿಳಿಸಿದ್ದಾರೆ.