ಜಾರ್ಖಂಡ್ ಹತ್ಯಾಕಾಂಡ : ಡಿಸಿ,ಎಸ್‌ಪಿ ಅಮಾನತು

Update: 2017-06-10 16:21 GMT

ರಾಂಚಿ,ಜೂ.10: ಮಕ್ಕಳ ಕಳ್ಳರೆಂಬ ಶಂಕೆಯಿಂದ ಜಾರ್ಖಂಡ್‌ನಲ್ಲಿ ಉದ್ರಿಕ್ತ ಗುಂಪುಗಳಿಂದ ಅಮಾಯಕರ ಹತ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ರಘುವರ ದಾಸ್ ಅವರು ಸೆರಾಯ್‌ಕೇಲಾ-ಖರ್ಸ್ವಾನ್ ಜಿಲ್ಲಾಧಿಕಾರಿ ರಮೇಶ ಘೋಲಪ್ ಮತ್ತು ಎಸ್‌ಪಿ ರಾಕೇಶ ಬನ್ಸಾಲ್ ಅವರನ್ನು ಕರ್ತವ್ಯಲೋಪದ ಆರೋಪದಲ್ಲಿ ಸೇವೆಯಿಂದ ಅಮಾನತು ಗೊಳಿಸಿದ್ದಾರೆ.

ಮೇ 18ರಂದು ರಾಜ್‌ನಗರದಲ್ಲಿ ಗುಂಪೊಂದು ನಾಲ್ವರನ್ನು ಥಳಿಸಿ ಕೊಂದಿದ್ದ ಪ್ರಕರಣದ ತನಿಖೆಗಾಗಿ ಸರಕಾರವು ರಚಿಸಿದ್ದ ಹಿರಿಯ ಅಧಿಕಾರಿಗಳ ತಂಡವು ಘಟನಾ ಸ್ಥಳದಿಂದ ಕೇವಲ 25 ಕಿ.ಮೀ.ದೂರದಲ್ಲಿ ಕಚೇರಿ ಮತ್ತು ನಿವಾಸಗಳನ್ನು ಹೊಂದಿದ್ದ ಈ ಅಧಿಕಾರಿಗಳು ಸ್ಥಳವನ್ನು ತಲುಪುವಲ್ಲಿ ಐದು ಗಂಟೆಗಳಷ್ಟು ವಿಳಂಬ ಮಾಡಿದ್ದರು ಎನ್ನುವುದನ್ನು ಪತ್ತೆ ಹಚ್ಚಿದೆ. ಉದ್ರಿಕ್ತ ಗುಂಪೊಂದು ನಾಲ್ವರು ವ್ಯಕ್ತಿಗಳನ್ನು ಒತ್ತೆಯಾಳು ಗಳನ್ನಾಗಿ ಇರಿಸಿಕೊಂಡಿದೆ ಎಂದು ಈ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು.

ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಸಕಾಲದಲ್ಲಿ ಕ್ರಮಗಳನ್ನು ಕೈಗೊಂಡಿದ್ದರೆ ನಾಲ್ವರ ಜೀವಗಳನ್ನು ರಕ್ಷಿಸಬಹುದಾಗಿತ್ತು ಎಂದು ತನಿಖಾ ತಂಡವು ಹೇಳಿದೆ. ಕೊಲ್ಹನ್ ವಿಭಾಗದಲ್ಲಿ ಮೇ 12ರಿಂದ 18ರ ನಡುವೆ ಮಕ್ಕಳ ಕಳ್ಳರೆಂದು ಶಂಕಿಸಿ ಉದ್ರಿಕ್ತ ಗುಂಪುಗಳು ಒಂಭತ್ತು ಜನರನ್ನು ಹತ್ಯೆ ಮಾಡಿದ್ದವು. ಇದು ಬಿಜೆಪಿ ಆಡಳಿತದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಗಂಭೀರ ಕಳವಳಗಳನ್ನು ಸೃಷ್ಟಿಸಿತ್ತು.

ಮೂಢನಂಬಿಕೆ, ಜಾನುವಾರು ವ್ಯಾಪಾರ, ವಾಟ್ಸಾಪ್ ಸಂದೇಶಗಳು ಮತ್ತು ಗಿರಿಜನ ಗುಂಪೊಂದರ ಪ್ರಚೋದನೆಯ ಜೊತೆಗೆ ಜಿಲ್ಲಾಧಿಕಾರಿ ಮತ್ತು ಎಸ್‌ಪಿಯ ಘೋರ ನಿರ್ಲಕ್ಷವೂ ಹತ್ಯೆಗಳಿಗೆ ಕಾರಣವಾಗಿತ್ತು ಎಂದು ತನಿಖಾ ತಂಡವು ತನ್ನ ವರದಿಯಲ್ಲಿ ತಿಳಿಸಿದೆ.

ಎಸ್‌ಪಿ ಮತ್ತು ಜಿಲ್ಲಾಧಿಕಾರಿ ಎಂದೂ ಪರಸ್ಪರರೊಂದಿಗೆ ಮಾತನಾಡಿರಲಿಲ್ಲ ಮತ್ತು ಸಮಾನಾಂತರ ಆದೇಶಗಳನ್ನು ಹೊರಡಿಸುತ್ತಿದ್ದರು, ಇದರಿಂದಾಗಿ ನಾಗರಿಕ ಆಡಳಿತ ಮತ್ತು ಪೊಲೀಸ್ ನಡುವೆ ಸಮನ್ವಯವಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News