ಮಹಿಳೆಯಿಂದ ಪ್ರಧಾನಿ ಮೋದಿಯ ಹತ್ಯೆಯ ಬೆದರಿಕೆ : ಬೃಹನ್ ಮುಂಬೈ ಪೊಲೀಸರಿಗೆ ದೂರು

Update: 2017-06-10 17:11 GMT

ಮಂಗಳೂರು, ಜೂ. 10: ಪುಣೆಯಲ್ಲಿ ಕೆಲಸ ಮಾಡುತ್ತಿರುವ ಕ್ರೈಸ್ತ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರು ಫೇಸ್‌ಬುಕ್‌ನಲ್ಲಿ ಬರೆದ ಕಮೆಂಟ್ ಆಕೆಯನ್ನು ಸಂಕಷ್ಟೀಡು ಮಾಡಿದೆ. ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದರೂ ತೊಕ್ಕೊಟ್ಟು ನಿವಾಸಿಯೊಬ್ಬರು ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆಯ ವಿವರ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಬಗ್ಗೆ ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪೇಜ್‌ವೊಂದಕ್ಕೆ ಫೇಸ್‌ಬುಕ್ ಗುಂಪೊಂದರಲ್ಲಿ ಕಮೆಂಟ್ಸ್ ಹಾಕಿದ ಚಿಕ್ಕಮಗಳೂರು ಮೂಲದ ಪ್ರಸ್ತುತ ಪುಣೆಯಲ್ಲಿ ದುಡಿಯುತ್ತಿರುವ ಅಲ್ಪಸಂಖ್ಯಾತ ಕ್ರೈಸ್ತ ಮಹಿಳೆಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರನ್ನು ‘ಮೋದಿ ಕುತ್ತೆ’ ಎಂದು ಉಲ್ಲೇಖಿಸಿ ‘‘ಇನ್ನು ಎರಡು ವರ್ಷ ನಿಮ್ಮ ಅಧಿಕಾರ. ಅದರೊಳಗೆ ಯಾರಾದರೂ ಮೋದಿಯನ್ನು ಬಾಂಬ್ ಸ್ಫೋಟಿಸಿ ಕೊಲ್ಲುತ್ತಾರೆ’’ಎಂದು ಹೇಳಿಕೊಂಡಿರುವುದರ ವಿರುದ್ಧ ಅದೇ ಗ್ರೂಪ್‌ನಲ್ಲಿನ ಸದಸ್ಯರೊಬ್ಬರು ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆದರಿದ ಮಹಿಳೆ ಆರಂಭದಲ್ಲಿ ಕ್ಷಮಾಪಣೆ ಕೋರಿ ಶನಿವಾರ ಮಧ್ಯಾಹ್ನದ ಹೊತ್ತಿಗೆ ಖಾತೆಯನ್ನು ಅಳಿಸಿದ್ದಾರೆ.

ಹಿಂದೂಸ್ಥಾನ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದರಲ್ಲಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿಯಾಗುತ್ತಿದ್ದಂತೆ 2023ರ ಹೊತ್ತಿಗೆ ಭಾರತ ಹಿಂದೂ ರಾಷ್ಟ್ರ ನಿರ್ಮಾಣವಾಗಬೇಕೆನ್ನುವ ಬಗ್ಗೆ ಹಿಂದೂ ಮುಖಂಡರೊಬ್ಬರ ನೇತೃತ್ವದಲ್ಲಿ ಗೋವಾದಲ್ಲಿ ರೂಪುರೇಷೆ ಸಿದ್ಧಗೊಳ್ಳುತ್ತಿದ್ದು, ಹಾಗೆಯೇ ಕ್ರೈಸ್ತರು ಇಸ್ಕಾನ್‌ಗೆ ಸೇರುವ ಮುಖಾಂತರ ಹಿಂದೂ ಧರ್ಮಕ್ಕೆ ಆಕರ್ಷಿತರಾಗುತ್ತಿರುವುದರ ಬಗ್ಗೆ ವರದಿಯುಳ್ಳ ಪುಟವನ್ನು ಫೇಸ್‌ಬುಕ್‌ನ ‘ಕೊಂಕಣ್ ತಾರಾ’ ಎಂಬ ಗುಂಪಿಗೆ ಜುಡಿತ್ ಲೇಸ್ ಎಂಬವರು ಶುಕ್ರವಾರ ಹಂಚಿಕೊಂಡಿದ್ದರು.

ಸ್ವಲ್ಪಹೊತ್ತಿನಲ್ಲಿ ಆ ಪುಟಕ್ಕೆ ಸಂಬಂಧಿಸಿ ಗ್ರೂಪ್‌ನ ಮತ್ತೊಬ್ಬ ಸದಸ್ಯೆ ಸವಿತಾ ಲ್ಯಾನ್ಸಿ ಡಿಸೋಜ ಎಂಬಾಕೆ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಾಚ್ಯ ಹಾಗೂ ತುಚ್ಛವಾದ ಶಬ್ಧಗಳುಳ್ಳ ಕಮೆಂಟ್ಸ್ ಹಾಕಿ ಮೋದಿ ಅಭಿಮಾನಿಗಳ ಹಾಗೂ ಗ್ರೂಪ್‌ನ ಕೆಲವು ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

‘ಕೊಂಕಣ್ ತಾರಾ’ ಗ್ರೂಪ್‌ನಲ್ಲಿ ಪ್ರಧಾನಿ ಮೋದಿಯವರ ಬಗ್ಗೆ ಆ ರೀತಿ ಕಮೆಂಟ್ ಹಾಕಿದ್ದಕ್ಕೆ ಗ್ರೂಪ್‌ನ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗ್ರೂಪ್‌ನ ಸದಸ್ಯ ಉಳ್ಳಾಲದ ಅಜಿತ್ ಬೃಹನ್ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಆ ಬಳಿಕವೂ ಮಹಿಳೆಯ ಹೇಳಿಕೆಯ ಕುರಿತು ಆಕ್ಷೇಪಾರ್ಹ ಬರವಣಿಗೆಗಳು ಕಂಡಿದ್ದು ಅದಕ್ಕೆ ದೂರುದಾರರು ಇನ್ನು ಮುಂದೆ ಆಕೆಯ ಹೇಳಿಕೆಗೆ ಪ್ರತಿಕ್ರಿಯಿಸಬೇಡಿ, ದೂರು ನೀಡಲಾಗಿದೆ ಎಂಬ ಸಂದೇಶ ರವಾನಿಸಿದ್ದರು. ಅದೇ ವೇಳೆ ಮಹಿಳೆ ದೂರುದಾರರಲ್ಲಿ ಕ್ಷಮೆ ಕೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮೋದಿಯವರ ಹತ್ಯೆ ಇಂಗಿತವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ ಸವಿತಾ ಲ್ಯಾನ್ಸಿ ಡಿಸೋಜ ಅವರ ಕಮೆಂಟ್ಸ್‌ಗಳ ಪೋಸ್ಟ್‌ನ ನಕಲನ್ನು ತೊಕ್ಕೊಟ್ಟು ನಿವಾಸಿ ಅಜಿತ್ ಕುಮಾರ್ ಬೃಹನ್ಮುಂಬೈ ಪೊಲೀಸರ ಫೇಸ್‌ಬುಕ್ ಪೇಜ್‌ಗೆ ಟ್ಯಾಗ್ ಮಾಡಿ ದೂರು ಕೊಟ್ಟಿದ್ದಾರೆ. ತಕ್ಷಣವೇ ಪೊಲೀಸರಿಂದ ಪ್ರತಿಕ್ರಿಯೆ ಬಂದಿದ್ದು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ತನ್ನ ವಿರುದ್ಧ ಪೊಲೀಸ್ ದೂರು ದಾಖಲಾಗುವ ಬಗ್ಗೆ ತಿಳಿದು ಎಚ್ಚೆತ್ತುಕೊಂಡ ಸವಿತಾ ಅಜಿತ್ ಕುಮಾರ್ ಅವರ ಫೇಸ್‌ಬುಕ್ ಇನ್‌ಬಾಕ್ಸ್‌ಗೆ ಸಂದೇಶ ರವಾನಿಸಿದ್ದಾರೆ. ಕೋಪದಿಂದ ಮೋದಿಯವರಿಗೆ ಹಾಗೆಂದಿರುವೆನು, ದಯವಿಟ್ಟು ನನ್ನನ್ನು ನಿಮ್ಮ ತಂಗಿ ಎಂದು ಪರಿಗಣಿಸಿ ಸಹಾಯ ಮಾಡಿ ಎಂದು ಕ್ಷಮಾಪಣೆ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News