×
Ad

ಕೆರೆಗಳ ಸಂರಕ್ಷಣೆಯಲ್ಲಿ ಸಾರ್ವಜನಿಕ ಸಹಭಾಗಿತ್ವ ಅಗತ್ಯ: ಡಾ. ಹೆಗ್ಗಡೆ

Update: 2017-06-10 23:48 IST

ಬೆಳ್ತಂಗಡಿ, ಜೂ. 10: ಪ್ರಾಕೃತಿಕವಾಗಿ ಲಭ್ಯವಿರುವ ಸಂಪನ್ಮೂಲಗಳ ಅತಿಯಾದ ಬಳಕೆಯಿಂದ ಪ್ರಾಕೃತಿಕ ಅಸಮತೋಲನ ತಲೆದೋರಿದ ಪರಿಣಾಮ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಪ್ರಾಕೃತಿಕ ಸಂಪನ್ಮೂಲಗಳ ಪೈಕಿ ನೀರು ಅತ್ಯಂತ ಅಮೂಲ್ಯವಾದುದು. ಆದುದರಿಂದ ನೀರಿನ ಎಚ್ಚರಿಕೆಯ ಬಳಕೆಯ ವಿಚಾರದಲ್ಲಿ ಜಾಗೃತಿ ಪ್ರತಿ ಯೊಬ್ಬರಲ್ಲೂ ಮೂಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.

ಅವರು ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕೆರೆ ಅಭಿವೃದ್ಧಿ ಸಮಿತಿಯ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ ಹುಗ್ಗಿ ಕೆರೆ ಕಾಮಗಾರಿಯ ಹಸ್ತಾಂತರವನ್ನು ನೆರೆವೇರಿಸಿ ಮಾತನಾಡಿದರು.

ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತಯಾರಿಸಲಾದ ಬೀಜದುಂಡೆ(ಸೀಡ್‌ಬಾಲ್)ಗಳನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದ ದೇವರಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠದ ಸಿದ್ಧ ಶಿವಯೋಗಿ ಮಹಾಸ್ವಾಮಿ ಅವರು, ದೇವರ ಹುಬ್ಬಳ್ಳಿಯ ಹುಗ್ಗಿ ಕೆರೆಗೆ ಶತಮಾನದ ಇತಿಹಾಸವಿದೆ. ಒಂದು ಕಾಲದಲ್ಲಿ ಇಡೀ ಗ್ರಾಮಕ್ಕೆ ಕುಡಿಯುವ ನೀರಿನ ಮೂಲ ಇದಾಗಿತ್ತು. ಆದರೆ ನೀರಿನ ಅತಿಶೋಷಣೆಯಿಂದ ನೀರಿನ ಅಭಾವ ತಲೆದೋರಿದೆ. ಇದೀಗ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡಮಾಡಿದ ನೆರವಿನೊಂದಿಗೆ ಗ್ರಾಮಸ್ಥರು ನೀಡಿದ ಸಹಕಾರದಿಂದಾಗಿ ಹಾಗೂ ವರುಣನ ಕೃಪೆಯಿಂದ ಕೆರೆ ಪೂರ್ತಿ ತುಂಬಿ ಗತವೈಭವದೊಂದಿಗೆ ಮತ್ತೆ ಕಂಗೊಳಿಸಲಿದೆ ಎಂದರು.

ಧಾರವಾಡ ಜಿಲ್ಲಾ ನಿರ್ದೇಶಕ ದಿನೇಶ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು.
  ಗ್ರಾಪಂ ಅಧ್ಯಕ್ಷೆ ಶ್ರೀಮತಿ ಮಂಜುಳಾ ಕೋಟಿ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಯೋಜನೆಯ ಧಾರವಾಡ ಪ್ರಾದೇಶಿಕ ನಿರ್ದೇಶಕ ಎನ್. ಜಯಶಂಕರ ಶರ್ಮ, ಜಿಪಂ ಸದಸ್ಯ ನಿಂಗಪ್ಪ ಮಾ. ಘಾಟಿನ, ತಾಪಂ ಸದಸ್ಯೆ ಪಕ್ಕೀರವ್ವ ನಾಯಕ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ ಗೌಡ, ಕರಿ ಗೌಡ ಉಪಸ್ಥಿತರಿದ್ದರು. ಯೋಜನಾಧಿಕಾರಿ ಉಲ್ಲಾಸ ಮೇಸ್ತ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News