ಹಾಲೆಂಡ್ ಪರ ಗರಿಷ್ಠ ಪಂದ್ಯವನ್ನಾಡಿದ ಸ್ನೈಡರ್

Update: 2017-06-10 18:42 GMT

ರೊಟರ್‌ಡಮ್(ಹಾಲೆಂಡ್), ಜೂ.10: ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಲಕ್ಸೆಂಬರ್ಗ್ ತಂಡದ ವಿರುದ್ಧ ಆಡುವ ಮೂಲಕ ವೆಸ್ಲೆ ಸ್ನೈಡರ್ ಹಾಲೆಂಡ್‌ನ ಪರ ಗರಿಷ್ಠ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಸಾಧನೆ ಮಾಡಿದರು.

ಸ್ನೈಡರ್ ಶುಕ್ರವಾರ ತನ್ನ 33ನೆ ಜನ್ಮದಿನದಂದು ಹಾಲೆಂಡ್‌ನ ಪರ 131ನೆ ಪಂದ್ಯವನ್ನಾಡಿದರು. ಈ ಮೂಲಕ ಮಾಜಿ ಗೋಲ್‌ಕೀಪರ್ ಎಡ್ವಿನ್ ವ್ಯಾನ್ ಡೆರ್ ಸರ್ ದಾಖಲೆಯನ್ನು ಮುರಿದರು. ಸ್ನೈಡರ್ ಮೊದಲಾರ್ಧದಲ್ಲಿ 31ನೆ ಅಂತಾರಾಷ್ಟ್ರೀಯ ಗೋಲು ಬಾರಿಸಿದರು.

 ಲಕ್ಸೆಂಬರ್ಗ್‌ನ ವಿರುದ್ಧ 5-0 ಅಂತರದಿಂದ ಜಯ ಸಾಧಿಸಿರುವ ಹಾಲೆಂಡ್ ‘ಎ’ ಗುಂಪಿನಲ್ಲಿ ಮೂರನೆ ಸ್ಥಾನಕ್ಕೇರಿದೆ.

 ಅಜಾಕ್ಸ್, ರಿಯಲ್ ಮ್ಯಾಡ್ರಿಡ್ ಹಾಗೂ ಇಂಟರ್ ಮಿಲನ್ ತಂಡಗಳ ಮಾಜಿ ಆಟಗಾರ ಸ್ನೈಡರ್ 2003ರಲ್ಲಿ ಪೋರ್ಚುಗಲ್‌ನ ವಿರುದ್ಧ ಚೊಚ್ಚಲ ಪಂದ್ಯ ಆಡಿದ್ದರು. ದಕ್ಷಿಣ ಆಫ್ರಿಕದಲ್ಲಿ ನಡೆದಿದ್ದ 2010ರ ಫಿಫಾ ವಿಶ್ವಕಪ್‌ನಲ್ಲಿ ಹಾಲೆಂಡ್ ತಂಡ ಫೈನಲ್‌ಗೆ ತಲುಪಲು ಸ್ನೈಡರ್ ಪ್ರಮುಖ ಪಾತ್ರವಹಿಸಿದ್ದರು. ಬ್ರೆಝಿಲ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಬಾರಿಸಿದ ಆಕರ್ಷಕ ಗೋಲು ಸಹಿತ ಟೂರ್ನಿಯಲ್ಲಿ ಒಟ್ಟು 5 ಗೋಲುಗಳನ್ನು ಬಾರಿಸಿ ನಾಲ್ಕನೆ ಜಂಟಿ ಅಗ್ರ ಸ್ಕೋರರ್ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News