ಒತ್ತಿನೆಣೆಯಲ್ಲಿ ಮತ್ತೆ ಗುಡ್ಡ ಕುಸಿತ: ರಾ.ಹೆದ್ದಾರಿ ಸಂಚಾರ ಬಂದ್

Update: 2017-06-11 04:58 GMT

ಬೈಂದೂರು, ಜೂ.11: ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಒತ್ತಿನೆಣೆಯಲ್ಲಿ ಮತ್ತೊಮ್ಮೆ ಗುಡ್ಡ ಕುಸಿತ ಉಂಟಾಗಿದ್ದು, ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಬಂದ್ ಆಗಿ ಪರಿಣಮಿಸಿದೆ.

ಈ ಪ್ರದೇಶದಲ್ಲಿ ಹೆದ್ದಾರಿ ಕಾಮಗಾರಿಗಾಗಿ ಗುಡ್ಡವನ್ನು ಕೊರೆಯಲಾಗಿದೆ. ವಾರದ ಹಿಂದೆ ಎರಡು ಬಾರಿ ಕುಸಿತಕ್ಕೊಳಗಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ್ದ ಒತ್ತಿನೆಣೆ ಗುಡ್ಡ ರಾತ್ರಿ ಮತ್ತೆ ಕುಸಿದು ರಸ್ತೆಯ ಮೇಲೆ ಬಿದ್ದಿದೆ. ಇದರಿಂದ ಹೆದ್ದಾರಿಯ ಎರಡು ರಸ್ತೆಗಳೂ ಸಂಪೂರ್ಣವಾಗಿ ಮುಚ್ಚಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.

ರಸ್ತೆಯಲ್ಲಿ ರಾಶಿ ಬಿದ್ದಿರುವ ಮಣ್ಣನ್ನು ಮೂರು ಬುಲ್ಡೋಝರ್‌ಗಳ ಸಹಾಯದಿಂದ ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಈ ನಡುವೆ ಬಸ್ ಸೇರಿದಂತೆ ಖಾಸಗಿ ವಾಹನಗಳ ಸಂಚಾರಕ್ಕೆ ಪರ್ಯಾಯ ರಸ್ತೆ ವ್ಯವಸ್ಥೆಯನ್ನು ಅಧಿಕಾರಿಗಳು ಕಲ್ಪಿಸಿದ್ದಾರೆ.

  ಉಡುಪಿ-ಕಾರವಾರ ಜಿಲ್ಲೆಯನ್ನು ಈ ಹೆದ್ದಾರಿ ಸಂಪರ್ಕ ಮಾಡುತ್ತದೆ. ಮುಂದೆ ಗೋವಾವನ್ನು ಸೇರುವುದರಿಂದ ಈ ಹೆದ್ದಾರಿಯಲ್ಲಿ ಘನ ವಾಹನಗಳು ಸಂಚಾರ ಮಾಡುತ್ತದೆ. ಗುಡ್ಡ ಕುಸಿತದಿಂದ ಇಂದು ಬೆಳಗ್ಗೆ ಹೆದ್ದಾರಿಯಲ್ಲಿ ಸುಮಾರು 2 ಕಿ.ಮೀ.ಗೂ ಅಧಿಕ ಉದ್ದದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಳಿಕ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು.

ವಾರದ ಹಿಂದೆ ಎರಡು ಬಾರಿ ಇದೇ ಭಾಗದಲ್ಲಿ ಮಣ್ಣು ಕುಸಿತವಾದಾಗ ಜಿಲ್ಲಾಡಳಿತ ಗುತ್ತಿಗೆ ಸಂಸ್ಥೆ ಐ.ಆರ್.ಬಿ. ಕಂಪೆನಿ ವಿರುದ್ಧ ಕೇಸು ದಾಖಲು ಮಾಡಿತ್ತು. ಕಳೆದ ಫೆಬ್ರವರಿಯಲ್ಲೇ ಕಾಮಗಾರಿ ಪೂರ್ಣಗೊಳಿಸುವುದಾಗಿ ನೀಡಿದ್ದ ಗಡುವು ಮೀರಿದ್ದರಿಂದ ಈ ಪ್ರಕರಣ ದಾಖಲಾಗಿತ್ತು. ಇದೀಗ ಮತ್ತೊಮ್ಮೆ ಗುಡ್ಡ ಕುಸಿದಿರುವುದರಿಂದ ಸಾರ್ವಜನಿಕರು ಐ.ಆರ್.ಬಿ. ಕಂಪೆನಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News