ಸ್ವಚ್ಛ ಮಂಗಳೂರಿನ 400 ಸ್ವಚ್ಛತಾ ಅಭಿಯಾನಗಳ ಸಮಾರೋಪ
ಮಂಗಳೂರು, ಜೂ.11: ರಾಮಕೃಷ್ಣ ಮಿಷನ್‌ನ ‘ಸ್ವಚ್ಛ ಮಂಗಳೂರು’ ಕಲ್ಪನೆಯ 400 ಸ್ವಚ್ಛತಾ ಅಭಿಯಾನಗಳ ಸಮಾರೋಪ ಸಮಾರಂಭ ನಗರದ ರಾಮಕೃಷ್ಣ ಮಠದಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಶ್ಚಿಮ ಬಂಗಾಳದ ರಾಮಕೃಷ್ಣ ಮಠದ ಉಪಾಧ್ಯಕ್ಷ ಸ್ವಾಮಿ ಗೌತಮಾನಂದಜಿ ಮಹರಾಜ್, ಯೋಗಶಾಸದಲ್ಲಿ ಮಾನಸಿಕ ಮತ್ತು ಶಾರೀರಿಕ ಸ್ವಚ್ಛತೆಗೆ ಪ್ರಾಮುಖ್ಯ ನೀಡಲಾಗಿದೆ. ನಾವು ಬಾಹ್ಯ ಸ್ವಚ್ಛತೆಯ ಜತೆಗೆ ಸಚ್ಚಾರಿತ್ತ್ಯದ ಮೂಲಕ ಮನಸ್ಸಿನ ಆಂತರಿಕ ಸ್ವಚ್ಛತೆಗೂ ಆದ್ಯತೆ ನೀಡಬೇಕು. ಆಗ ಬಲಶಾಲಿ ಭಾರತ ನಿರ್ಮಾಣ ಸಾಧ್ಯ ಎಂದರು.
ಕೇಂದ್ರ ಸರಕಾರದ ಕೋರಿಕೆ ಮೇರೆಗೆ ದೇಶಾದ್ಯಂತ ಸ್ವಚ್ಛತಾ ಅಭಿಯಾನ ನಡೆದರೂ ಎಲ್ಲೆಡೆ 100ಕ್ಕಿತ ಹೆಚ್ಚು ಕಾರ್ಯಕ್ರಮ ನಡೆದಿಲ್ಲ. ಮಂಗಳೂರು ರಾಮಕೃಷ್ಣ ಮಿಷನ್ 400 ಕಾರ್ಯಕ್ರಮಗಳ ಮೂಲಕ ಮುಂಚೂಣಿಯಲ್ಲಿದೆ ಎಂದು ಸ್ವಾಮಿ ಗೌತಮಾನಂದಜಿ ಮಹರಾಜ್ ಅಭಿನಂದಿಸಿದರು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಾತನಾಡಿ, ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮನಸ್ಸುಗಳ ಸೃಷ್ಟಿ ಶಾಲೆ ಮಕ್ಕಳಿಂದ ಸಾಧ್ಯವಾಗಬೇಕು. ಮಂಗಳೂರಿನ ನಾಗರಿಕರ ಸಹಯೋಗದಿಂದ ಸ್ವಚ್ಛ ಮಂಗಳೂರು ಸಾಧ್ಯವಾಗಿದೆ. ಮುಂದೆ ಗ್ರಾಮೀಣ ಸ್ವಚ್ಛತೆಗೆ ಆದ್ಯತೆ ನೀಡಲಿದ್ದೇವೆ ಎಂದರು.
ಸಂಸದ ನಳಿನ್ ಕುಮಾರ್ ಕಟೀ, ನಿಟ್ಟೆ ವಿವಿ ಕುಲಾಧಿಪತಿ ಡಾ.ಎನ್. ವಿನಯ ಹೆಗ್ಡೆ, ಎಂಆರ್‌ಪಿಎಲ್ ನಿರ್ದೇಶಕ ಎ.ಕೆ.ಸಾಹೂ, ಜಿಜಿಎಂ ಬಿ.ಎಚ್.ವಿಪ್ರಸಾದ್ ಮಾತನಾಡಿದರು.
ರಾಮಕೃಷ್ಣ ಮಿಷನ್‌ನ ‘ಅರ್ಪಣಾ’ ಕಾರ್ಯಕ್ರಮ ಅಂಗವಾಗಿ ದ.ಕ. ಮತ್ತು ಉಡುಪಿ ಜಿಲ್ಲೆಯ ಫಲಾನುಭವಿಗಳಿಗೆ ಉಚಿತವಾಗಿ ವಸಗಳನ್ನು ವಿತರಿಸಲಾಯಿತು. ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಸಂತೋಷ್ ವಂದಿಸಿದರು. ಸ್ವಚ್ಛ ಮಂಗಳೂರು ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಕಾರ್ಯಕ್ರಮ ನಿರೂಪಿಸಿದರು.