×
Ad

ಕುಮಟಾ: ಗುಡ್ಡ ಕುಸಿದು ಮೂವರು ಮಕ್ಕಳು ಮೃತ್ಯು

Update: 2017-06-11 16:06 IST

ಕಾರವಾರ, ಜೂ.11: ಗುಡ್ಡ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಎಳೆ ಮಗು ಸಹಿತ ಮೂವರು ಮಕ್ಕಳು ಮೃತಪಟ್ಟ ದಾರುಣ ಘಟನೆ ಕುಮಟಾ ತಾಲೂಕಿನ ರಾ.ಹೆ.66ರ ದಿವಗಿ ಗ್ರಾಮದ ತಂಡ್ರಕುಳಿ ಎಂಬಲ್ಲಿ ಇಂದು ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ಸಮೀಪದ ಮನೆಯಲ್ಲಿದ್ದ 1 ವರ್ಷ 2 ತಿಂಗಳ ಮಗು ಧನುಷ್, ಏಳು ವರ್ಷದ ಬಾಲಕ ಯಿತಿನ್ ಹಾಗೂ 13 ವರ್ಷದ ಬಾಲಕಿ ಭವ್ಯಾ ಮೃತಪಟ್ಟವರಾಗಿದ್ದಾರೆ. ಘಟನೆಯಲ್ಲಿ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಹಲವರು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ಎರಡು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಹೆದ್ದಾರಿಯ ಅಗಲೀಕರಣ ಕಾಮಗಾರಿಯನ್ನು ಐ.ಆರ್.ಬಿ. ಕಂಪೆನಿ ನಡೆಸುತ್ತಿದೆ. ಕಾಮಗಾರಿ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಗುಡ್ಡವನ್ನು ಭಾರೀ ಪ್ರಮಾಣದಲ್ಲಿ ಅಗೆಯಲಾಗಿದೆ. ಕಳೆದೆರೆಡು ದಿನಗಳಿಂದ ಪರಿಸರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗುಡ್ಡದ ಎರಡು ಬದಿ ಸಡಿಲಗೊಂಡಿದೆ. ಇದರಿಂದಾಗಿ ಈ ಅನಾಹುತ ಸಂಭವಿಸಿದೆ. ಗುಡ್ಡ ಕುಸಿತದಿಂದ ಭಾರೀ ಪ್ರಮಾಣದಲ್ಲಿ ಮಣ್ಣು ಕಲ್ಲುಗಳು ಅಲ್ಲೇ ಕೆಳಭಾಗದಲ್ಲಿರುವ ಮೀನುಗಾರರ ಮನೆಗಳ ಮೇಲೆ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ.

ಮಣ್ಣಿನಡೀ ಇನ್ನೂ ಹಲವರು ಸಿಲುಕಿಕೊಂಡಿದ್ದರೆನ್ನಲಾಗಿದ್ದು, ಭಾರೀ ಮಳೆ ತೆರವು ಕಾರ್ಯಾಚರಣೆಗೂ ಅಡ್ಡಿಯಾಗಿ ಪರಿಣಮಿಸಿದೆ. ಐಆರ್‌ಬಿ, ಕುಮಟಾ ಪೊಲೀಸರು, ಅಗ್ನಿಶಾಮಕ ದಳದವರು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೆದ್ದಾರಿಯಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿದ್ದು, ಕುಮಟಾ ಅಂತ್ರಳ್ಳಿ ಮಾರ್ಗದಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

ಘಟನೆಯ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News