ಕಲ್ಲಡ್ಕ: ಸ್ಥಳೀಯರಿಂದ ಚರಂಡಿಯ ಸ್ವಚ್ಛತೆ
Update: 2017-06-11 16:41 IST
ಬಂಟ್ವಾಳ, ಜೂ. 11: ಕಲ್ಲಡ್ಕ ಸರಕಾರಿ ಶಾಲಾ ಮೈದಾನದ ಪಕ್ಕದಲ್ಲಿ ಮುಸ್ತಫಾ ಇಸ್ಮಾಯಿಲ್ ನಗರ ನೇತೃತ್ವದಲ್ಲಿ ಸ್ಥಳೀಯರಿಂದ ಚರಂಡಿಯ ಸ್ವಚ್ಛತೆ ನಡೆಯಿತು.
ಕಳೆದ 15 ವರ್ಷಗಳಿಂದ ಕಲ್ಲಡ್ಕ ಪ್ರಾಥಮಿಕ ಶಾಲಾ ಮೈದಾನದ ಪಕ್ಕದಲ್ಲಿದ್ದ ಚರಂಡಿಯ ತ್ಯಾಜ್ಯವನ್ನು ಗೋಳ್ತಮಜಲು ಗ್ರಾಮ ಪಂಚಾಯತ್ ಒಮ್ಮೆಯೂ ವಿಲೇವಾರಿ ಮಾಡಿಲ್ಲ. ಇದರಿಂದಾಗಿ ಚರಂಡಿಯಲ್ಲಿ ತ್ಯಾಜ್ಯ ತುಂಬಿ ಕಲುಷಿತ ನೀರು ರಸ್ತೆಯಲ್ಲಿ ಹರಿದಾಡುತ್ತಿದೆ.
ಅಲ್ಲದೆ ಮಿತಿಮೀರಿದ ತ್ಯಾಜ್ಯ ಸಂಗ್ರಹದಿಂದ ಸ್ಥಳೀಯ ಪರಿಸರದಲ್ಲಿ ಮಾರಕ, ಸಾಂಕ್ರಮಿಕ ರೋಗ ಹರಡುವ ಸಾಧ್ಯತೆಯಿದೆ. ಈ ಬಗ್ಗೆ ಗೋಳ್ತಮಜಲು ಗ್ರಾಮ ಪಂ.ಗೆ, ಬಂಟ್ವಾಳ ತಾಲೂಕು ಪಂ. ಹಾಗೂ ದ.ಕ ಜಿಲ್ಲಾ ಪಂ.ಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಬೇಸತ್ತ ಸ್ಥಳೀಯರೇ ಹಣ ಸಂಗ್ರಹಿಸಿ ಇಂದು ಜೆಸಿಬಿ ಸಹಾಯದಿಂದ ಚರಂಡಿ ಸ್ವಚ್ಚಗೊಳಿಸಿದರು.