ಕ್ರೈಸ್ತ ಶಿಕ್ಷಕ ಸ್ಥಾಪಿಸಿದ್ದ 94 ವರ್ಷ ಹಳೆಯ ಶಾಲೆ ಇದೀಗ ಆರೆಸ್ಸೆಸ್ ತೆಕ್ಕೆಗೆ!
ಮೂಡುಬಿದಿರೆ, ಜೂ.11: ಶಿಕ್ಷಣ ವಂಚಿತ ಬಡವರ್ಗದ ಮಕ್ಕಳು ವಿದ್ಯಾವಂತರಾಗುವ ಮೂಲಕ ಅಭಿವೃದ್ಧಿ ಹೊಂದಬೇಕು ಎಂಬ ಮೂಲ ಧ್ಯೇಯೋದ್ದೇಶದೊಂದಿಗೆ 94 ವರ್ಷಗಳ ಹಿಂದೆ ಮೂಡುಬಿದಿರೆಯ ಕಡಲ ಕೆರೆಯಲ್ಲಿ ಕ್ರೈಸ್ತ ಶಿಕ್ಷಕರೊಬ್ಬರು ಸ್ಥಾಪಿಸಿದ್ದ ಶಾಲೆ ಇದೀಗ ಆರೆಸ್ಸೆಸ್ ತೆಕ್ಕೆ ಸೇರಿದೆ.
ಶಿಕ್ಷಕರಾಗಿದ್ದ ಸಾಲ್ವಡೋರ್ ಡಿಸೋಜ 1923ರಲ್ಲಿ ಕಡಲಕೆರೆಯಲ್ಲಿನ ತಮ್ಮ ಖಾಸಗಿ ಜಾಗದಲ್ಲಿ ಮುಳಿಹುಲ್ಲಿನ ಕಟ್ಟಡದಲ್ಲಿ ಸಂತ ಇಗ್ನೇಶಿಯಸ್ ಹಿ.ಪ್ರಾ. ಶಾಲೆಯನ್ನು ಆರಂಭಿಸಿದ್ದರು. 1980ರವರೆಗೆ ಅವರ ಕುಟುಂಬಸ್ಥರ ಆಡಳಿತ ನಿರ್ವಹಣೆಯಲ್ಲೇ ಇತ್ತು. ಬಳಿಕ 1999ರವರೆಗೆ ಅಂದರೆ 19 ವರ್ಷಗಳ ಕಾಲ ಪಳಕಳ ಸೀತಾರಾಮ ಭಟ್ ಅಧ್ಯಕ್ಷರಾಗಿದ್ದು ಶಾಲೆಯನ್ನು ಮುನ್ನಡೆಸಿದ್ದರು. 1983ರಲ್ಲಿ ಇದನ್ನು ಹೆಂಚಿನ ಕಟ್ಟಡವಾಗಿ ಅಭಿವೃದ್ಧಿ ಪಡಿಸಲಾಯಿತು. 1999ರ ನಂತರ ಮೂಡುಬಿದಿರೆಯ ಶ್ರೀ ವೆಂಕಟರಮಣ ಶಿಕ್ಷಣ ಪ್ರತಿಷ್ಠಾನ 9 ವರ್ಷಗಳವರೆಗೆ ಶಾಲೆಯ ಆಡಳಿತ ನಿರ್ವಹಣೆಯನ್ನು ಮಾಡಿತು. 2008ರಿಂದ ಮಂಗಳೂರಿನ ಸೇವಾಂಜಲಿ ಎಜ್ಯುಕೇಶನ್ ಟ್ರಸ್ಟ್ ಆ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು.
ಪ್ರಸ್ತುತ ಸರಕಾರಿ ಅನುದಾನಿತ ಈ ಕನ್ನಡ ಮಾಧ್ಯಮ ಶಾಲೆಯಲ್ಲಿ 78 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು, ಒಟ್ಟು ಏಳು ಅಧ್ಯಾಪಕರಿದ್ದಾರೆ. ಈ ಪೈಕಿ ಓರ್ವ ಶಿಕ್ಷಕರಿಗೆ ಮಾತ್ರ ಸರಕಾರಿ ವೇತನ ಪಾವತಿಸುತ್ತಿದೆ. ಉಳಿದ 6 ಮಂದಿಯ ವೇತನವನ್ನು ಸೇವಾಂಜಲಿ ಎಜ್ಯುಕೇಶನ್ ಟ್ರಸ್ಟ್ ನೀಡುತ್ತಿದೆ. ದಾನಿಗಳ ನೆರವಿನಿಂದ ಮುನ್ನಡೆಯುತ್ತಿದ್ದ ಶಾಲೆ ನಾಲ್ಕು ಎಕರೆ ವಿಸ್ತಾರವಾದ ಸರಕಾರಿ ಜಾಗವನ್ನು ಹೊಂದಿದೆ.
ಇದೀಗ ಸೇವಾಂಜಲಿ ಟ್ರಸ್ಟ್‌ನಲ್ಲಿರುವ ಟ್ರಸ್ಟಿಗಳು ಮಂಗಳೂರು ಮೂಲದವರಾದ್ದರಿಂದ ಮತ್ತು ಇಲ್ಲಿನ ಶಾಲಾ ಆಡಳಿತವನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಿದೆ ಎಂಬ ಕಾರಣ ಮುಂದಿಟ್ಟು ಶಾಲೆಯನ್ನು ಆರೆಸ್ಸೆಸ್‌ನ ವಿದ್ಯಾಭಾರತಿ ಶಿಕ್ಷಣ ಘಟಕದ ಆಶಯಗಳಂತೆ ಕಾರ್ಯನಿರ್ವಹಿಸುತ್ತಿರುವ ಮೂಡುಬಿದಿರೆಯ ಪ್ರೇರಣಾ ಸೇವಾ ಟ್ರಸ್ಟ್‌ಗೆ ವಹಿಸಿ ಕೊಟ್ಟಿದೆ. ಇದರಂಗವಾಹಿ ದೀಕ್ಷಾವಿಧಿ ಪ್ರಬೋಧನೆ ಕಾರ್ಯಕ್ರಮವು ಮೇ 31ರಂದು ಶಾಲಾ ಆವರಣದಲ್ಲಿ ನಡೆಯಿತು. ಈ ವೇಳೆ ಪ್ರೇರಣಾ ಶಿಶು ಮಂದಿರವನ್ನು ಪ್ರಾರಂಭಿಸಲಾಗಿದೆ. ಸೇವಾಂಜಲಿಯೂ ಶಾಲೆಯ ಆಡಳಿತದಲ್ಲಿ ಸಹಕಾರ ನೀಡುತ್ತಿದೆ.
‘‘ಆರೆಸ್ಸೆಸ್ ತತ್ವಾದರ್ಶಗಳ ಸಹಿತ ಭಾರತೀಯ ಪರಂಪರೆಯನ್ನು ವಿದ್ಯಾರ್ಥಿಗಳಿಗೆ ನೀಡುವ ಉದ್ದೇಶ ವಿಟ್ಟುಕೊಂಡು ಶಾಲೆಯನ್ನು ಮುನ್ನಡೆಸುತ್ತೇವೆ. ರಾಜ್ಯ ಸರಕಾರದ ಪಠ್ಯಕ್ರಮದ ಜೊತೆಗೆ ಭಾರತೀಯ ಪದ್ಧತಿಯ, ಗುರುಕುಲದ ವೇದ, ಯೋಗ ಮುಂತಾದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು’’ ಎಂದು ಆರೆಸ್ಸೆಸ್‌ನ ತಾಲೂಕು ಸಂಘಚಾಲಕ್ ಆಗಿರುವ ಹಾಗೂ ಪ್ರೇರಣಾದ ಟ್ರಸ್ಟಿ ಎಂ.ವಾಸುದೇವ ಭಟ್ ತಿಳಿಸಿದ್ದಾರೆ.
ಈ ಶಾಲೆಯ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಮೂರು ಸರಕಾರಿ, ಎರಡು ಅನುದಾನಿತ ಶಾಲೆಗಳಿವೆ. ಅಲ್ಲದೆ ಆಂಗ್ಲ ಮಾಧ್ಯಮ ಶಾಲೆಗಳೂ ಇವೆ. ಆದರೂ ಸಂತ ಇಗ್ನೇಶಿಯಸ್ ಶಾಲೆಯಲ್ಲಿ 74 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳ ಪ್ರಯಾಣಕ್ಕೆ ಉಚಿತ ಆಟೊ ರಿಕ್ಷಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸರಕಾರದ ವತಿಯಿಂದ ಬಿಸಿಯೂಟದ ವ್ಯವಸ್ಥೆ, ನಿರ್ವಹಣೆಗೆ ಸಿಬ್ಬಂದಿಯೂ ಇದ್ದಾರೆ. ಸರಕಾರಿ ಅಂಗನವಾಡಿ ಕೇಂದ್ರ ಕಾರ್ಯಾಚರಿಸುತ್ತಿದ್ದು, ಸುಮಾರು 30 ಮಕ್ಕಳು ವರ್ಷಪ್ರಂತಿ ಕಲಿಯುತ್ತಾರೆ.
ಪ್ರೇರಣಾ ಶಿಶುಮಂದಿರ:
ಇದೀಗ ಹೊಸ ಶಾಲಾಡಳಿತವು ಮೂರರಿಂದ ಆರು ವರ್ಷದೊಳಗಿನ ಮಕ್ಕಳ ಕಲಿಕೆಗಾಗಿ ‘ಪ್ರೇರಣಾ ಶಿಶುಮಂದಿರ’ ಆರಂಭಿಸಿದೆ. ಇಲ್ಲಿ ಹಿಂದು ಸೇವಾ ಪ್ರತಿಷ್ಠಾನದಿಂದ ವಿಶೇಷವಾಗಿ ತರಬೇತುಗೊಂಡಿರುವ ‘ಮಾತಾಜೀ’ ಎಂದು ಕರೆಯಲ್ಪಡುವ ಶಿಕ್ಷಕರು ಮಕ್ಕಳಿಗೆ ಕಲಿಸಲಿದ್ದಾರೆ. ಇಲ್ಲಿ ಮಕ್ಕಳಿಗೆ ಬಾಲ್ಯದಲ್ಲೇ ರಾಷ್ಟ್ರೀಯತೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಟ್ರಸ್ಟಿಗಳು ತಿಳಿದ್ದಾರೆ.
ಸಂತ ಇಗ್ನೇಶಿಯಸ್ ಶಾಲೆಯಲ್ಲಿ ಏಳು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೂತನ ಕಟ್ಟಡ, ಆಕರ್ಷಕ ಪ್ರಾಂಗಣ, ಇನ್ನಷ್ಟು ಸಿಬ್ಬಂದಿ, ಬಸ್ ವ್ಯವಸ್ಥೆ ಮೊದಲಾದ ಸೌಕರ್ಯಗಳು ದೊರೆತಲ್ಲಿ ಶಾಲೆಗೆ ವಿದ್ಯಾರ್ಥಿಗಳನ್ನು ಸೆಳೆಯುವುದು ಸಾಧ್ಯ. ಈ ಶಾಲೆಯ ಮೂವರು ಖಾಯಂ ಶಿಕ್ಷಕರು ನಿವೃತ್ತರಾಗಿದ್ದು, ನಂತರ ಯಾವುದೇ ನೇಮಕಾತಿ ಸರಕಾರದ ಕಡೆಯಿಂದ ಆಗಿಲ್ಲ. ಆರು ಶಿಕ್ಷಕರ ವೇತನ ಸಹಿತ ಉಳಿದ ನಿರ್ವಹಣಾ ಖರ್ಚುಗಳನ್ನು 2008ರಿಂದ ಇದುವರೆಗೆ ಸೇವಾಂಜಲಿ ಎಜ್ಯುಕೇಶನ್ ಟ್ರಸ್ಟ್ ವಹಿಸಿಕೊಂಡಿದೆ. ಜೊತೆಗೆ ಹಳೆ ವಿದ್ಯಾರ್ಥಿ ಸಂಘ, ಎಸ್‌ಡಿಎಂಸಿ ಹಾಗೂ ದಾನಿಗಳು ನೆರವಾಗುತ್ತಿದ್ದರು. ಇದೀಗ ಅವರ ಜೊತೆ ಪ್ರೇರಣಾ ಸೇವಾ ಟ್ರಸ್ಟ್ ಕೈಜೋಡಿಸುತ್ತಿದೆ.
- ಬಿ. ಜಯರಾಮ್ ರಾವ್, ಶಾಲಾ ಮುಖ್ಯೋಪಾಧ್ಯಾಯರು
ಪ್ರೇರಣಾ ಸೇವಾ ಟ್ರಸ್ಟ್ ಮೂಲಕ ಸಂತ ಇಗ್ನೇಶಿಯಸ್ ಶಾಲೆಯ ಆಡಳಿತ ನಿರ್ವಹಣೆಯ ಜವಾಬ್ದಾರಿ ಇದೀಗ ನಮಗೆ ದೊರೆತಿದೆ. 2013ರಲ್ಲಿ ಸ್ಥಾಪನೆ ಯಾದ ನಮ್ಮ ಸಂಸ್ಥೆಯಿಂದ ಇನ್ನಷ್ಟು ಶಿಕ್ಷಣ ಸಂಸ್ಥೆಗಳಿಗೆ ಸಹಾಯ ಮಾಡುವ ಯೋಜನೆ ಇರಿಸಿಕೊಂಡಿದ್ದೇವೆ.
- ಎಂ.ವಾಸುದೇವ ಭಟ್