ದೇಶದ ಎಲ್ಲ ವಿಚಾರಗಳಲ್ಲಿ ಜಾತಿಯೇ ಪ್ರಮುಖ: ಡಾ.ಸುಂದರ ಮೊಲಿ

Update: 2017-06-11 13:09 GMT

ಉಡುಪಿ, ಜೂ.11: ಸ್ವಾತಂತ್ರ್ಯ ಭಾರತದ ಆರಂಭದಲ್ಲಿ ಸಮಾಜದ ಒಳಿತಿಗಾಗಿ ಜಾತಿ, ಮತಗಳನ್ನು ಹೊರಗಿಟ್ಟು ಎಲ್ಲರು ಒಂದೇ ಎಂಬ ಭಾವನೆ ಇತ್ತು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲಾ ವಿಚಾರಗಳಲ್ಲಿ ಜಾತಿ ಮುಖ್ಯವಾಗಿ ಬಿಟ್ಟಿದೆ. ಹಾಗಾಗಿ ದೇಶದಲ್ಲಿ ಜಾತಿ ವ್ಯವಸ್ಥೆ ಸಾಕಷ್ಟು ಪರಿಣಾಮಕಾರಿ ವಿಚಾರ ಬೆಳೆದಿದೆ ಎಂದು ಲಂಡನ್‌ನ ಮನೋರೋಗ ತಜ್ಞ ಡಾ.ಸುಂದರ ಮೊಲಿ ಹೇಳಿದ್ದಾರೆ.

ಉಡುಪಿ ದೇವಾಡಿಗ ಯುವ ವೇದಿಕೆ, ನಾದಶ್ರೀ ಸೇವಾ ಟ್ರಸ್ಟ್, ಸೀತಾ ರಾಮ ಮಹಿಳಾ ಭಜನಾ ಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಪ್ರತಿಭಾ ಪುರಸ್ಕಾರ, ಶಾಲಾ ಪರಿಕರ ವಿತರಣೆ, ಅಶಕ್ತರಿಗೆ ನೆರವು ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.

ದೇವಾಡಿಗ ಯುವ ಸಾಧಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮುಂಬೈ ತಂಡದ, ಅಂತಾರಾಷ್ಟ್ರೀಯ ಕಬ್ಬಡಿ ಆಟಗಾರ ರಿಷಾಂಕ್ ದೇವಾಡಿಗ, ಸಾಧಿಸ ಬೇಕೆಂಬ ಗುರಿಯ ಜೊತೆಗೆ ಪ್ರಾಮಾಣಿಕತೆ ಮತ್ತು ಬದ್ಧತೆ ಇರಬೇಕು. ಸತತ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉಡುಪಿ ಉಪ ತಹಶೀಲ್ದಾರ್ ಗೋಪಾಲ್ ಸೇರಿಗಾರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ.ಬಿ.ಎಸ್.ಸೇರಿಗಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲೆ ಡಾ.ಮಾಧವಿ ಭಂಡಾರಿ, ಬೆಂಗಳೂರು ಡಿಸಿಎ ಕಂಪೆನಿಯ ಹರಿ ಟಿ.ದೇವಾಡಿಗ, ಮೂಡಬಿದ್ರಿ ಸಂಘದ ಮಾಜಿ ಅಧ್ಯಕ್ಷ ರತ್ನಾಕರ ದೇವಾಡಿಗ, ಭಾರತೀಯ ಮಾನವ ಹಕ್ಕು ಸಮಿತಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ್ ಬೆಸ್ಕೂರ್, ಉದ್ಯಮಿ ಹರೀಶ್ ದೇವಾಡಿಗ, ಕೊಲ್ಲೂರು ಡಾಟ್ ಕಾಂನ ಸಂಯೋಜಕಿ ಪ್ರಿಯದರ್ಶಿನಿ ದೇವಾಡಿಗ ಉಪಸ್ಥಿತರಿದ್ದರು.
 

ವಿವಿಧ ಕ್ಷೇತ್ರಗಳ ಸಾಧಕರಾದ ನಿತ್ಯಾನಂದ ಒಳಕಾಡು, ರಘು ಸೇರಿಗಾರ್, ಭಾಸ್ಕರ ಸೇರಿಗಾರ್, ಮಹಿಮಾ ದೇವಾಡಿಗ, ಮನೀಶ್ ಶೇರಿಗಾರ್, ಸುಂದರ್ ಸೇರಿಗಾರ್ ಅವರನ್ನು ಸನ್ಮಾನಿಸಲಾಯಿತು. ಎಸೆಸೆಲ್ಸಿ, ಪಿಯುಸಿಯಲ್ಲಿ ಉಡುಪಿ ತಾಲೂಕು ಮಟ್ಟದಲ್ಲಿ ಗರಿಷ್ಠ ಅಂಕ ಗಳಿಸಿದ ದೇವಾಡಿಗ ಸಮಾಜದ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ, 7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ವಿತರಿಸಲಾಯಿತು.

ವೇದಿಕೆ ಪ್ರದಾನ ಕಾರ್ಯದರ್ಶಿ ಪ್ರವೀಣ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಅಧ್ಯಕ್ಷ ಪ್ರಭಾಕರ ಕೆ.ಎಸ್. ಸ್ವಾಗತಿಸಿದರು. ಬಳಿಕ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News