ಅಂಗರಗುಂಡಿ: ರೈಲ್ವೆ ಅಂಡರ್‌ಪಾಸ್‌ನಲ್ಲಿ ಕೃತಕ ನೆರೆ

Update: 2017-06-11 13:51 GMT

ಮಂಗಳೂರು, ಜೂ. 11: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಬಿರುಸಿನ ಮಳೆಗೆ ಬೈಕಂಪಾಡಿ ಸಮೀಪದ ಅಂಗರಗುಂಡಿ ರೈಲ್ವೆ ಅಂಡರ್‌ಪಾಸ್‌ನಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದು, ಜನ ಮತ್ತು ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.

ರೈಲ್ವೆ ಅಂಡರ್‌ಪಾಸ್ ನಿರ್ಮಾಣವಾಗಬೇಕೆಂಬ ಅಂಗರಗುಂಡಿ ನಾಗರಿಕರ ಒತ್ತಾಯದ ಮೇರೆಗೆ ಅಂಗರಗುಂಡಿಯಲ್ಲಿ ರೈಲ್ವೆ ಅಂಡರ್‌ಪಾಸ್‌ನ್ನು ನಿರ್ಮಿಸಿ ಎರಡು ತಿಂಗಳ ಹಿಂದಷ್ಟೇ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಆದರೆ, ಕಾಟಚಾರಕ್ಕೆ ಚರಂಡಿ ವ್ಯವಸ್ತೆ ಮಾಡಿದ್ದರೂ ಅದರ ನಿರ್ವಹಣೆ ಸರಿಯಾಗಿಲ್ಲದೆ, ಅಂಡರ್‌ಪಾಸ್‌ನಲ್ಲಿ ಸಂಗ್ರಹವಾಗುವ ಮಳೆಯ ನೀರು ಹರಿಯದೆ ರಸ್ತೆ ಮೇಲೆ ನಿಂತು ನೆರೆ ಸೃಷ್ಟಿಯಾಗಿದೆ ನಾಗರಿಕರು ಆರೋಪಿಸಿದ್ದಾರೆ.

ಶನಿವಾರದಿಂದಲೇ ಅಂಡರ್‌ಪಾಸ್‌ನಲ್ಲಿ ನೀರು ನಿಂತಿದ್ದರೂ ವಾಹನ ಮತ್ತು ಜನರ ಸಂಚಾರಕ್ಕೆ ಅಡಚಣೆಯಾಗಿರಲಿಲ್ಲ. ಆದರೆ, ರವಿವಾರ ಮಧ್ಯಾಹ್ನದ ಹೊತ್ತಿಗೆ ನೀರಿನ ಪ್ರಮಾಣ ಮೇಲೆ ಬಂದು ದ್ವಿಚಕ್ರ ವಾಹನ ಮಾತ್ರವಲ್ಲದೆ ನಾಲ್ಕು ಚಕ್ರಗಳ ವಾಹನವೂ ಹೋಗಲು ಸಾಧ್ಯವಾಗದ ಪರಿಸ್ಥಿತಿ ಉದ್ಭವವಾಗಿದೆ. ಇದನ್ನು ರೈಲ್ವೆ ಇಲಾಖೆಯವರು ಗಂಭೀರವಾಗಿ ಪರಿಗಣಿಸಿ ನೀರು ಹರಿದು ಹೋಗಲು ಸೂಕ್ತ ಕ್ರಮ ಕೈಗೊಳ್ಳಬೇರೆಂದು ಅಂಗರಗುಂಡಿಯ ನಾಗರಿಕರು ಒತ್ತಾಯಿಸಿದ್ದಾರೆ.

ದ್ವೀಪದಂತಾದ ಅಂಡರ್‌ಪಾಸ್‌ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ಸಂಗ್ರಹವಾಗಿ ನೆರೆ ಸೃಷ್ಟಿಯಾಗಿರುವುದರಿಂದ ಅಂಗರಗುಂಡಿಯ ನಾಗರಿಕರು ಓಡಾಡಲು ಸಾಧ್ಯವಾಗದೆ ದ್ವೀಪದಲ್ಲಿರುವ ಅನುಭವವಾಗುತ್ತಿದೆ ಎಂದು ಅಂಗರಗುಂಡಿಯ ನಿವಾಸಿ ಸೈದುದ್ದೀನ್ ತಿಳಿಸಿದ್ದಾರೆ.

ಅಂಡರ್‌ಪಾಸ್ ನಿರ್ಮಾಣದ ಸಂದರ್ಭದಲ್ಲಿ ಬದಿಗಳಲ್ಲಿ ಚರಂಡಿ ನಿರ್ಮಿಸಿದ್ದರೂ ಇದೀಗ ಅದರಲ್ಲಿ ಮಣ್ಣು ತುಂಬಿದ್ದರಿಂದ ನೀರು ಹರಿಯಲು ಸಾಧ್ಯವಾಗದೆ ರಸ್ತೆಯಲ್ಲೇ ನಿಂತಿದೆ. ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಂಡು ನಾಗರಿಕರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News