52.32ಲಕ್ಷ ರೂ ವೆಚ್ಚದ ನೋಟ್ ಬುಕ್ ವಿತರಣೆ ಮುಂದಿನ ವರ್ಷ ಕೊಡೆ ವಿತರಣೆ -ಮೊಯ್ದಿನ್ ಬಾವ
ಮಂಗಳೂರು, ಜೂ.11: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ನನ್ನ ಹುಟ್ಟು ಹಬ್ಬದ ಪ್ರಯುಕ್ತ 52,32,000 ರೂ. ವೆಚ್ಚದಲ್ಲಿ 3,80,000 ಸಾವಿರ ಪುಸ್ತಕ ವಿತರಿಸಲಾಗಿದೆ. ಕಳೆದ ಹದಿನೈದು ವರ್ಷಗಳಿಂದಲೂ ಈ ರೀತಿ ಪುಸ್ತಕ ವಿತರಣೆ ಮಾಡಲಾಗುತ್ತಿದೆ ಇದರಲ್ಲಿ ಯಾವೂದೇ ರಾಜಕೀಯ ಲಾಭದ ಉದ್ದೇಶ ಹೊಂದಿಲ್ಲ. ಆದರೂ ಈ ಕಾರ್ಯವನ್ನು ಬಿಜೆಪಿ ಟೀಕಿಸುತ್ತಿರುವುದು ನೋವುಂಟು ಮಾಡಿದೆ. ಇದು ನನ್ನ ಖಾಸಗಿ ಆದಾಯದ ಮೊತ್ತವನ್ನು ವಿದ್ಯಾರ್ಥಿಗಳಿಗಾಗಿ ವಿನಿಯೋಗಿಸುತ್ತಿರುವುದಾಗಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಒಂದರಿಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟು ಪುಸ್ತಕಗಳನ್ನು ನನ್ನ ವೈಯಕ್ತಿಕ ವೆಚ್ಚದಿಂದ ನೀಡಿದ್ದೇನೆ. ಇದನ್ನು ಬಿಜೆಪಿಯ ಮಾಜಿ ಸಚಿವರು ಟೀಕೆ ಮಾಡುತ್ತಿರುವುದು ಸರಿಯಲ್ಲ. ಈ ಪುಸ್ತಕದಲ್ಲಿ ಎಲ್ಲೂ ಪಕ್ಷದ ಚಿಹ್ನೆಯನ್ನಾಗಲಿ ಪಕ್ಷದ ಹೆಸರನ್ನಾಗಿ ಪ್ರಕಟಿಸಿಲ್ಲ. ಬಿಜೆಪಿಯ ಶಾಸಕ ನಾರಾಯಣ ಸ್ವಾಮಿ ಎಂಬವರು ತಮ್ಮ ಸೇವಾ ಸಂಸ್ಥೆಯೊಂದರ ಮೂಲಕ ವಿದ್ಯಾರ್ಥಿಗಳಿಗೆ ವಿತರಿಸಿದ ನೋಟ್ ಬುಕ್‌ಗಳಲ್ಲಿ ತಮ್ಮ ಪೋಟೊ ಬಿಜೆಪಿ ಪಕ್ಷದ ಚಿಹ್ನೆ ಪ್ರಧಾನಿ ಮೋದಿಯ ಚಿತ್ರವನ್ನು ಪ್ರಕಟಿಸಿದ್ದಾರೆ. ಈ ಬಗ್ಗೆ ಯಾವೂದೇ ಬಿಜೆಪಿ ಮುಖಂಡರು ಚಕಾರ ಎತ್ತದೆ ನನ್ನ ವಿರುದ್ಧ ಕ್ಷಲ್ಲಕ ಟೀಕೆ ಮಾಡುತ್ತಿದ್ದಾರೆ ಎಂದು ಮೊಯ್ದಿನ್ ಬಾವ ತಿಳಿಸಿದರು.
ಮುಂದಿನ ವರ್ಷ ಮಕ್ಕಳಿಗೆ ಪುಸ್ತಕದ ಜೊತೆ ಕೊಡೆಯೂ ವಿತರಿಸುತ್ತೇನೆ:-
ಮುಂದಿನ ವರ್ಷ ವಿದ್ಯಾರ್ಥಿಗಳಿಗೆ ಪುಸ್ತಕದ ಜೊತೆ ಕೊಡೆಯೂ ವಿತರಿಸುತ್ತೇನೆ. ಈ ಹಿಂದೆಯೂ 15 ವರ್ಷಗಳಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಬೇಕು ಎಂದು ನನ್ನನ್ನು ಸಂಪರ್ಕಿಸುತ್ತಿದ್ದ ವಿದ್ಯಾರ್ಥಿಗಳಿಗೆ ,ಶಾಲೆಗಳಿಗೆ ಬರೆಯುವ ಪುಸ್ತಕ ವಿತರಿಸುತ್ತಾ ಬಂದಿದ್ದೇನೆ. ಶಾಸಕನಾದ ಬಳಿಕವೂ ಇನ್ನಷ್ಟು ಹೆಚ್ಚು ಜನರಿಗೆ ನೀಡಿದ್ದೇನೆ ಮುಂದೆಯೂ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿತರಿಸುವ ಗುರಿ ಹೊಂದಿದ್ದೇನೆ. ಮುಂದಿನ ವರ್ಷ ವಿದ್ಯಾರ್ಥಿಗಳಿಗೆ ನನ್ನ ವೈಯಕ್ತಿಕ ವೆಚ್ಚದಿಂದ ಕೊಡೆಗಳನ್ನು ವಿತರಿಸುವ ಗುರಿ ಹೊಂದಿರುವುದಾಗಿ ಮೊಯ್ದಿನ್ ಬಾವ ತಿಳಿಸಿದ್ದಾರೆ.
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಶಾಲೆ ಹಾಗೂ ಸಂಘ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪರಿಸರ ಸಂರಕ್ಷಣೆಗಾಗಿ ಬೃಹತ್ ಪ್ರಮಾಣದಲ್ಲಿ ಸಸಿ ವಿತರಿಸುವುದಾಗಿ ಮೊಯ್ದಿನ್ ಬಾವ ತಿಳಿಸಿದ್ದಾರೆ.
ಅಭಿವೃದ್ಧಿಯ ಹೆಸರಿನಲ್ಲಿ ರಾಜಕೀಯ ಮಾಡಿಲ್ಲ:-
ನನ್ನ ಕ್ಷೇತ್ರದಲ್ಲಿ ವಿವಿಧ ಜಾತಿ, ಸಮುದಾಯದ ಧಾರ್ಮಿಕ ಕ್ಷೇತ್ರಗಳಿಗೆ ಸರಕಾರದಿಂದ ಸಿಗಬಹುದಾದ ಅನುದಾನವನ್ನು ದೊರಕಿಸಿ ಕೊಡಲು ಪ್ರಯತ್ನಿಸಿದ್ದೇನೆ. ಧಾರ್ಮಿಕ ದತ್ತಿ ಇಲಾಖೆಯಿಂದ ದೊರೆಯಬಹುದಾದ ಅನುದಾನವನ್ನು ದೊರಕಿಸಿ ಕೊಟ್ಟಿದ್ದೇನೆ. ಸಕಾಲದಲ್ಲಿ ಅನುದಾನ ಬರುವುದು ವಿಳಂಬವಾದಾಗ ವೈಯಕ್ತಿಕ ಆದಾಯದಿಂದ, ಶಾಸಕರ ನಿಧಿಯಿಂದ ಅನುದಾನ ನೀಡಿ ಸಕಾಲದಲ್ಲಿ ನೆರವು ನೀಡಿದ್ದೇನೆ. ನಾನು ನೀಡಿರುವ ಭರಸೆಗಳ ಬಗ್ಗೆ ಸುಳ್ಳು ಎಂದು ಅಪಪ್ರಚಾರದಲ್ಲಿ ತೊಡಗಿರುವವರು ನನ್ನ ಜೊತೆ ನೇರ ಸಂವಾದದಲ್ಲಿ ಭಾಗವಹಿಸಲಿ ಅವರ ಸವಾಲನ್ನು ಎದುರಿಸಲು ಸಿದ್ಧವಿರುವುದಾಗಿ ಮೊಯ್ದಿನ್ ಬಾವ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರತಿಭಾ ಕುಳಾಯಿ, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳಾದ ಗಿರೀಶ್, ಶಿಫಾಲ್ ರಾಜ್, ಕೇಶವ ಸನಿಲ್, ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.