ಗೋಹತ್ಯೆ ನಿಷೇಧದ ಬಗ್ಗೆ ವರದಿ ಸಲ್ಲಿಸಲು ಇಂದಿರಾ ನೇಮಿಸಿದ್ದ ಸಮಿತಿ ವರದಿ ಸಲ್ಲಿಸಲೇ ಇಲ್ಲ ...!

Update: 2017-06-11 15:46 GMT

ಹೊಸದಿಲ್ಲಿ, ಜೂ.11: ಗೋಹತ್ಯೆ ವಿಷಯ ದೇಶದಲ್ಲಿ ಸುಮಾರು ಅರ್ಧ ಶತಮಾನದಿಂದಲೂ ವಿವಾದವಾಗಿಯೇ ಮುಂದುವರಿದಿದೆ. ಆದರೆ ಗೋಹತ್ಯೆ ನಿಷೇಧಿಸಬೇಕೇ ಎಂಬ ಬಗ್ಗೆ ವರದಿ ನೀಡಲು 1966ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಸಮಿತಿಯೊಂದನ್ನು ನೇಮಿಸಿದ್ದರು. ಆರೆಸ್ಸೆಸ್ ಮುಖಂಡ ಎಂ.ಎಸ್.ಗೋಳ್ವಾಲ್ಕರ್, ಹಿಂದೂ ಮುಖಂಡ ಶಂಕರಾಚಾರ್ಯರು ಸಮಿತಿಯ ಸದಸ್ಯರಾಗಿದ್ದರು. ಆದರೆ 12 ವರ್ಷ ಕಳೆದರೂ ಈ ಸಮಿತಿ ವರದಿ ನೀಡಲೇ ಇಲ್ಲ..

  ಈ ಸ್ವಾರಸ್ಯಕರ ಅಂಶವನ್ನು ಬಿಚ್ಚಿಟ್ಟವರು ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್. ಇಂದಿರಾ ಗಾಂಧಿ ಕುರಿತು ಜೈರಾಮ್ ರಮೇಶ್ ಬರೆದಿರುವ ಹೊಸ ಪುಸ್ತಕ- ‘ಇಂದಿರಾಗಾಂಧಿ: ಎ ಲೈಫ್ ಇನ್ ನೇಚರ್’ ಕೃತಿಯಲ್ಲಿ ಈ ಕುರಿತ ವಿವರಣೆಯಿದೆ.

 ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ 1966ರ ನವೆಂಬರ್ 7ರಂದು ಸಾಧುಗಳು ಸಂಸತ್ತಿಗೆ ‘ಮುತ್ತಿಗೆ’ ಹಾಕಿದ್ದ ಪ್ರಕರಣ ನಡೆದಿತ್ತು. ಇವರಲ್ಲಿ ಕೆಲವರು ಕೇಸರಿ ದಿರಿಸು ತೊಟ್ಟಿದ್ದರೆ, ಇನ್ನು ಕೆಲವರು ನಗ್ನರಾಗಿದ್ದರು. ಪ್ರತಿಭಟನೆ ಉಗ್ರರೂಪಕ್ಕೆ ತಿರುಗಿದಾಗ ಪೊಲೀಸರು ಗೋಲಿಬಾರ್ ನಡೆಸಿದ್ದು ಕೆಲವರು ಬಲಿಯಾಗಿದ್ದರು. ಘಟನೆಗೆ ಸಂಬಂಧಿಸಿ ಅಂದಿನ ಗೃಹ ಸಚಿವ ಗುಲ್ಜಾರಿಲಾಲ್ ನಂದ ರಾಜೀನಾಮೆ ನೀಡಬೇಕಾಯಿತು.

 ಜಾನುವಾರು ಹತ್ಯೆ ನಿಷೇಧದ ಬಗ್ಗೆ ಪರಿಶೀಲನೆ ನಡೆಸುವ ಉದ್ದೇಶದಿಂದ ಜೂನ್ 29ರಂದು ಇಂದಿರಾಗಾಂಧಿ ಉನ್ನತ ಮಟ್ಟದ ಸಮಿತಿಯೊಂದನ್ನು ನೇಮಿಸಿದ್ದರು. ಭಾರತದ ಮಾಜಿ ಪ್ರಧಾನ ನ್ಯಾಯಾಧೀಶ ಎ.ಕೆ.ಸರ್ಕಾರ್ ಸಮಿತಿಯ ಮುಖ್ಯಸ್ಥರಾಗಿದ್ದರು. ಡಾ.ವಿ.ಕುರಿಯನ್ ಮುಂತಾದ ಅನುಭವಿಗಳು ಸಮಿತಿಯಲ್ಲಿದ್ದರು.ಶಂಕರಾಚಾರ್ಯ, ಆರೆಸ್ಸೆಸ್ ಮುಖಂಡ ಎಂ.ಎಸ್.ಗೋಳ್ವಾಲ್ಕರ್ ಕೂಡಾ ಸಮಿತಿಯ ಸದಸ್ಯರಾಗಿದ್ದರು.

 ವರದಿ ಸಲ್ಲಿಸಲು ಆರು ತಿಂಗಳ ಕಾಲಾವಕಾಶ ನೀಡಲಾಗಿತ್ತು. 12 ವರ್ಷ ಕಳೆದರೂ ಸಭೆ ಸೇರಿ ಚರ್ಚೆ ನಡೆಸುವುದಕ್ಕಷ್ಟೇ ಸಮಿತಿಯ ಕಾರ್ಯ ಸೀಮಿತವಾಗಿತ್ತು. ಸಮಿತಿ ವರದಿ ಸಲ್ಲಿಸಲೇ ಇಲ್ಲ. ಬಳಿಕ 1979ರಲ್ಲಿ ಇಂದಿರಾಗಾಂಧಿಯವರ ಉತ್ತರಾಧಿಕಾರಿಯಾಗಿದ್ದ ಮೊರಾರ್ಜಿ ದೇಸಾಯಿ ಈ ಸಮಿತಿಯನ್ನು ಬರ್ಖಾಸ್ತುಗೊಳಿಸಿದರು ಎಂದು ಕೃತಿ ಬಿಡುಗಡೆ ಸಮಾರಂಭದಲ್ಲಿ ಜೈರಾಮ್ ರಮೇಶ್ ಹೇಳಿದರು.

 ಹೌದು, ಸಮಿತಿ ವರದಿ ಸಲ್ಲಿಸಲೇ ಇಲ್ಲ ಎಂದು ಸಮಾರಂಭದಲ್ಲಿ ಉಪಸ್ಥಿತರಿದ್ದ ರಾಜ್ಯಸಭಾ ಸದಸ್ಯ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಕರಣ್ ಸಿಂಗ್ ಪ್ರತಿಕ್ರಿಯಿಸಿದರು. ಕರಣ್ ಸಿಂಗ್ ಅವರು ಇಂದಿರಾಗಾಂಧಿ ಸಚಿವ ಸಂಪುಟದ ಸದಸ್ಯರಾಗಿದ್ದವರು. ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News