ಸಾಬರಮತಿ ಸ್ಫೋಟ: ಮಾಡದ ತಪ್ಪಿಗೆ 16 ವರ್ಷಗಳ ಕಾಲ ಜೈಲಿನಲ್ಲಿ ಕೊಳೆದ ಗುಲ್ಝಾರ್ ಅಹ್ಮದ್
ಶ್ರೀನಗರ, ಜೂ.11: ಸಾಬರಮತಿ ರೈಲು ಸ್ಫೋಟ ಪ್ರಕರಣದ ಆರೋಪದಿಂದ ಮುಕ್ತರಾಗಿ ಗುಲ್ಝಾರ್ ಅಹ್ಮದ್ ವಾನಿ 16 ವರ್ಷಗಳ ಬಳಿಕ ಮನೆಗೆ ಹೆಜ್ಜೆಹಾಕಿದಾಗ ಭಾವನೆಗಳು ಕಟ್ಟೆಯೊಡೆದವು. ಹದಿನಾರು ವರ್ಷ ಜೈಲುವಾಸ ಅನುಭವಿಸಿದ 42 ವರ್ಷದ ವಾನಿ ಅವರನ್ನು 2000ನೇ ಇಸ್ವಿಯಲ್ಲಿ ಒಂಬತ್ತು ಮಂದಿಯನ್ನು ಬಲಿ ಪಡೆದ ಸಾಬರಮತಿ ಎಕ್ಸ್‌ಪ್ರೆಸ್ ರೈಲು ಸ್ಫೋಟ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಆದರೆ ಇದೀಗ ಆ ಸ್ಫೋಟದ ಹಿಂದೆ ಕೇಸರಿ ಉಗ್ರಗಾಮಿ ಸಂಘಟನೆಗಳ ಕೈವಾಡ ಬಹಿರಂಗವಾಗಿದೆ.
2001ರಲ್ಲಿ ಗುಲ್ಝಾರ್ ಅವರನ್ನು ದಿಲ್ಲಿ ಪೊಲೀಸ್ ಪಡೆಯ ವಿಶೇಷ ಘಟಕ ಬಂಧಿಸಿ, ಸ್ಫೋಟ ಪ್ರಕರಣದ ಆರೋಪ ಹೊರಿಸಿತ್ತು. ತಾನು ಮಾಡದ ಆರೋಪಕ್ಕಾಗಿ ಶಿಕ್ಷೆ ಎದುರಿಸುವಂತಾಗಿತ್ತು ಎಂದು ಜೈಲಿನಲ್ಲಿ ಓದಿಗೆ ಗಮನ ಹರಿಸಿದ್ದ ವಾನಿ ನುಡಿದರು.
ದಿಲ್ಲಿಯಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುಳ್ಳು ದಾಖಲೆ ತೋರಿಸಿ, 2001ರಲ್ಲಿ ಬಂಧಿಸಲಾಗಿತ್ತು. 10 ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು, ಪ್ರಕರಣ ದಾಖಲಿಸಲಾಯಿತು. ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದಲ್ಲಿ ಕೂಡಾ ವಾರಂಟ್ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿತ್ತು ಎಂದು ವಾನಿ ಹೇಳಿದರು.
ವಾನಿ ಬಂಧನದ ಬಳಿಕ ಎಷ್ಟೇ ಸಂಕಷ್ಟ ಎದುರಿಸಿದರೂ, ನಿವೃತ್ತ ಸರಕಾರಿ ಉದ್ಯೋಗಿ ತಂದೆ, ತಮ್ಮ ಎಲ್ಲ ಉಳಿತಾಯವನ್ನು ನ್ಯಾಯಾಲಯ ಪ್ರಕರಣಗಳಿಗಾಗಿ ಖರ್ಚು ಮಾಡಿ, ಗುಲ್ಝಾರ್ ಬಿಡುಗಡೆಗೆ ಪಣ ತೊಟ್ಟಿದ್ದರು. ವಾನಿ ಜೈಲಿನಲ್ಲಿದ್ದ ಅವಧಿಯಲ್ಲಿ ಇಬ್ಬರು ಸಹೋದರಿಯರ ವಿವಾಹವಾಗಿದ್ದು, ಅಜ್ಜ-ಅಜ್ಜಿ ಕೂಡಾ ಈ ಅವಧಿಯಲ್ಲಿ ಮೃತಪಟ್ಟಿದ್ದಾರೆ.
ಆತನ ಬಂಧನದ ಬಳಿಕ ಇಬ್ಬರು ಸಹೋದರಿಯರ ವಿವಾಹವಾಯಿತು. ವಿವಾಹ ವಾಸ್ತವವಾಗಿ ಸಂಭ್ರಮಿಸುವ ಕ್ಷಣ. ಆದರೆ ನಮ್ಮ ಪಾಲಿಗೆ ಬೇಸರದ ಸಂಗತಿಯಾಗಿತ್ತು ಎಂದು ತಂದೆ ಗುಲಾಂ ಮುಹಮ್ಮದ್ ವಾನಿ ಹೇಳಿದರು. ಇದೀಗ ಕೆಟ್ಟ ಕಾಲ ಮುಗಿದು ಹೊಸ ಜೀವನ ಆರಂಭವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ವಾನಿ ಕುಟುಂಬ ಇದೆ.