ಜಿಲ್ಲೆಯಾದ್ಯಂತ ಭಾರೀ ಮಳೆಗಾಳಿ: ಮರವಂತೆ ಹೆದ್ದಾರಿಯಲ್ಲಿ ಬಿರುಕು; ಮರ ಬಿದ್ದು ಹಾನಿ
ಉಡುಪಿ, ಜೂ.11: ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದ ಮರವಂತೆ ಬೀಚ್‌ನಲ್ಲಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಿರುಕು ಕಂಡಿದ್ದು, ವಾಹನ ಸಂಚಾರಕ್ಕೆ ತೀರಾ ತೊಂದರೆ ಉಂಟಾಗಿದೆ. ಅದೇ ರೀತಿ ಹಲವು ಕಡೆ ಮನೆಗಳಿಗೆ ನೀರು ನುಗ್ಗಿರುವ ಹಾಗೂ ಮರಗಳು ಧರೆಗೆ ಉರುಳಿರುವ ಬಗ್ಗೆ ವರದಿಯಾಗಿದೆ.
ಕಳೆದ ಒಂದು ವಾರದ ಹಿಂದೆ ಈ ಹೆದ್ದಾರಿಯ ಒಂದು ಬದಿಯಲ್ಲಿ ಬಿರುಕು ಕಂಡುಬಂದಿದ್ದು, ಈ ಬಗ್ಗೆ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪೆನಿ ಯವರ ಗಮನಕ್ಕೆ ತರಲಾಗಿತ್ತು. ಆದರೆ ಅವರು ಆ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದ ಪರಿಣಾಮ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸುಮಾರು ಒಂದು ಕಿ.ಮೀ. ವರೆಗೆ ಈ ಬಿರುಕು ವಿಸ್ತರಿಸಿದೆ.
ಬಿರುಕು ಸುಮಾರು ಐದು ಇಂಚು ಅಗಲದಷ್ಟಿದ್ದು, ಅದು ಇನ್ನಷ್ಟು ವೃದ್ಧಿಸುವ ಅಪಾಯ ಇದೆ. ಭಾರೀ ವಾಹನಗಳು ಇದರ ಮೇಲೆ ಸಂಚರಿ ಸುವುದು ತೀರಾ ಅಪಾಯಕಾರಿಯಾಗಿದೆ. ಈಗಾಗಲೇ ಹೆದ್ದಾರಿಯ ಒಂದು ಬದಿ ಸಿಂಕ್ ಆದಂತೆ ಕಂಡುಬಂದಿದೆ.
ಇಂದು ಬೆಳಗ್ಗೆ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಸುಬ್ಬಣ್ಣ ನೇತೃತ್ವದ ಪೊಲೀಸರ ತಂಡ ಮತ್ತು 24x7 ಎಮೆರ್ಜೆನ್ಸಿ ಹೆಲ್ಪ್‌ಲೈನ್‌ನ ಕಾರ್ಯಕರ್ತರು ಬಿರುಕು ಕಂಡ ಬದಿಯಲ್ಲಿ ಬ್ಯಾರಿಗೇಡ್ ಹಾಗೂ ಅಪಾಯದ ಪಟ್ಟಿಯನ್ನು ಹಾಕಿದರು. ಇದೀಗ ಈ ಭಾಗದಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾ ಗುತ್ತಿದೆ.
ಮರಬಿದ್ದು ಅಂಗಡಿಗೆ ಹಾನಿ: ಕಳೆದ 24 ಗಂಟೆ ಅವಧಿಯಲ್ಲಿ ಉಡುಪಿ ತಾಲೂಕಿನಲ್ಲಿ 161 ಮೀ.ಮೀ., ಕುಂದಾಪುರ ತಾಲೂಕಿನಲ್ಲಿ 170.9 ಮೀ. ಮೀ., ಕಾರ್ಕಳ ತಾಲೂಕಿನಲ್ಲಿ 160.7 ಮೀ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಜಿಲ್ಲೆಯಲ್ಲಿ ಸಾಸರಿ 164.2 ಮೀ.ಮೀ. ಮಳೆಯಾಗಿದೆ.
ಉಡುಪಿ ನಗರದ ಕಟ್ಟೆ ಆಚಾರ್ಯ ರಸ್ತೆಯಲ್ಲಿರುವ ನಾಗಬನದ ಸುಮಾರು 120 ವರ್ಷ ಹಳೆಯ ಮಾವಿನ ಮರವೊಂದು ಇಂದು ಬೆಳಗಿನ ಜಾವ 3:30ರ ಸುಮಾರಿಗೆ ಸಮೀಪದ ಸ್ಥಳೀಯ ನಿವಾಸಿ ಇಸ್ಮಾಯಿಲ್ ಎಂಬವರ ಜಿನಸಿ ಅಂಗಡಿಯ ಮೇಲೆ ಬಿದ್ದು ಕೋಣೆಯ ಛಾವಣಿ ಮತ್ತು ಗೋಡೆಗೆ ಮತ್ತು ನಾಗಬನದ ಕಂಪೌಂಡ್‌ಗೆ ಹಾನಿ ಉಂಟು ಮಾಡಿದೆ.
ರಸ್ತೆಗೆ ಅಡ್ಡವಾಗಿ ಬಿದ್ದ ಮರವನ್ನು ಅಗ್ನಿಶಾಮಕ ದಳ, ಮೆಸ್ಕಾಂ ಮತ್ತು ನಗರಸಭೆ ಸಿಬ್ಬಂದಿಗಳು ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಬೃಹತ್ ಮರವಾಗಿರುವುದರಿಂದ ಸಂಜೆಯ ವರೆಗೆ ತೆರವು ಕಾರ್ಯಾಚರಣೆ ಮುಂದು ವರೆದಿತ್ತು. ಈ ಘಟನೆಯಿಂದ ಸುಮಾರು 30 ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಮಹೇಶ್ಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಡ್ರೈನೇಜ್ ಕಾಲುವೆ ಕುಸಿತ: ಇಂದು ಮುಂಜಾನೆ ಕರಾವಳಿ ಜಂಕ್ಷನ್ನಲ್ಲಿ ಮಳೆ ನೀರು ನಿಂತು ಕೃತಕ ನೆರೆ ಸೃಷ್ಟಿಯಾಯಿತು. ಹೊಸದಾಗಿ ನಿರ್ಮಾಣಗೊಂಡ ಡೈನೇಜ್ ಕಾಲುವೆ ಕುಷಿತಗೊಂಡ ಪರಿಣಾಮ ವಾಹನ ಸಂಚಾರಕ್ಕೆ ಸ್ವಲ್ಪಕಾಲ ತಡೆ ಉಂಟಾಯಿತು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಜಿಲ್ಲಾಡಳಿತದ ಮತ್ತು ನಗರಾಡಳಿತದ ವಿಪತ್ತು ನಿರ್ವಹಣಾ ಸಾಹಯವಾಣಿಗೆ ಕರೆ ಮಾಡಿದರು. ಇದಕ್ಕೆ ಯಾವುದೇ ಸ್ಪಂದನೆ ದೊರೆಯಲಿಲ್ಲ. ಕೊನೆಗೆ ಅನಿವಾರ್ಯ ಪರಿಸ್ಥಿತಿಯಲ್ಲಿ ವಿಶು ಶೆಟ್ಟಿ ಮತ್ತು ಸ್ಥಳೀಯ ರಿಕ್ಷಾ ಚಾಲಕರು, ಪೊಲೀಸರು ಸ್ಥಳಕ್ಕೆ ಬರುವವರೆಗೂ ಸುಗಮ ಸಂಚಾರಕ್ಕೆ ಅನುವುಮಾಡಿ ಕೊಟ್ಟರು.
ಅದೇ ರೀತಿ ಎಲ್ಲೂರು ಶ್ರೀ ವಿಶ್ವನಾಥ ದೇವಸ್ಥಾನದ ಕಟ್ಟಡ ಮೇಲೆ ಮರ ಬಿದ್ದು ಅಪಾರ ಹಾನಿ ಸಂಭವಿಸಿದೆ. ಬ್ರಹ್ಮಾವರ ಬೋಳುಗುಡ್ಡೆ ಎಂಬಲ್ಲಿ ಲಲಿತಾ ಬಾಯಿ ಎಂಬವರ ಮನೆಯ ಮೇಲೆ ಮರ ಬಿದ್ದು 3.5 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.
ಬೈಂದೂರು ಪಡುವರಿಯಲ್ಲಿ ಹೆದ್ದಾರಿ ಕಾಮಗಾರಿಯಿಂದಾಗಿ ಕೆಲವು ಮನೆ ಗಳಿಗೆ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ.