ನಕಲಿ ವೆಬ್‌ಸೈಟ್ ಸೃಷ್ಟಿಸಿ ವಂಚನೆ: ಇಬ್ಬರು ಆರೋಪಿಗಳ ಬಂಧನ
ಮಂಗಳೂರು, ಜೂ.11: ನಕಲಿ ವೆಬ್‌ಸೈಟ್ ಸೃಷ್ಟಿಸಿ ವಿದೇಶಿ ಕರೆನ್ಸಿ ಹಾಗೂ ದುಬಾರಿ ಮೊತ್ತದ ಗಿಫ್ಟ್ ಕಳುಹಿಸುವುದಾಗಿ ನಂಬಿಸಿ 1.58 ಲಕ್ಷ ರೂ. ವಂಚಿಸಿದ ಇಬ್ಬರು ಅಂತರ್‌ರಾಜ್ಯ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಮಿಜೋರಾಂ ರಾಜ್ಯದ ಲಾಲ್‌ತಾನ್ ಮಾಲಿಯಾ (34) ಹಾಗೂ ಮಣಿಪುರದ ಕೂಪ್ ಬೊಯಿ ಯಾನೆ ಲಿಯಾನ್ ಕೂಪ್ (32) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಹೊಸದಿಲ್ಲಿಯ ವಿಕಾಸ್‌ಪುರಿ ಎಂಬಲ್ಲಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದೇಶಿ ಕರೆನ್ಸಿ ಹಾಗೂ ದುಬಾರಿ ಮೊತ್ತದ ಗಿಫ್ಟ್ ಕಳುಹಿಸಿ ಕೊಡುವುದಾಗಿ ರಾಯಲ್ ಬ್ಯಾಂಕ್ ಸ್ಕಾಟ್‌ಲ್ಯಾಂಡ್ ಹೊಸದಿಲ್ಲಿ ಎಂಬ ಹೆಸರಿನಲ್ಲಿ ಇ ಮೇಲ್ ಸೃಷ್ಟಿಸಿ ಈ ಮೂಲಕ ವ್ಯಕ್ತಿಯನ್ನು ಸಂಪರ್ಕಿಸಿ 1.58 ಲಕ್ಷ ರೂ. ತಮ್ಮ ಖಾತೆಗೆ ಜಮೆ ಮಾಡಿಸಿಕೊಂಡು ಕೊನೆಗೆ ವಿದೇಶಿ ಕರೆನ್ಸಿ ಹಾಗೂ ಗಿಫ್ಟ್ ನೀಡದೆ ವಂಚನೆ ಮಾಡಿದ್ದಾರೆ ಎಂದು ವಾಯಿಲೆಟ್ ಡಿಸೋಜ ಎಂಬವರು ಮೇ 31 ರಂದು ಉಳ್ಳಾಲ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆಗೆ ಆರಂಭಿಸಿದ್ದರು. ಉಳ್ಳಾಲ ಇನ್‌ಸ್ಪೆಕ್ಟರ್ ಕೆ.ಆರ್.ಗೋಪಿಕೃಷ್ಣ, ಪಿಎಸ್‌ಐ ರಾಜೇಂದ್ರ, ಎಎಸ್‌ಐ ವಿಜಯರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪೊಲೀಸ್ ಆಯುಕ್ತ ಎಂ.ಚಂದ್ರಸೇಖರ್, ಡಿಸಿಪಿಗಳಾದ ಶಾಂತರಾಜು, ಹನುಮಂತರಾಯ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಉಪವಿಭಾಗದ ಎಸಿಪಿ ಶ್ರುತಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.