ಗೋಲಿಬಾರ್‌ಗೆ ಬಲಿಯಾದ ರೈತರ ಮನೆಗೆ ಭೇಟಿ ನೀಡಲು ಮೇಧಾ, ಅಗ್ನಿವೇಶ್‌ಗೆ ನಿರಾಕರಣೆ
ಭೋಪಾಲ್, ಜೂ.11: ಮಧ್ಯಪ್ರದೇಶದ ಮಂದ್‌ಸೋರ್ ಜಿಲ್ಲೆಯಲ್ಲಿ ಪೊಲೀಸರ ಗೋಲೀಬಾರ್‌ನಲ್ಲಿ ಮೃತಪಟ್ಟ ರೈತರ ಕುಟುಂಬವರ್ಗದವರನ್ನು ಭೇಟಿಯಾಗಲು ತೆರಳುತ್ತಿದ್ದ ಸಾಮಾಜಿಕ ಕಾರ್ಯಕರ್ತರಾದ ಮೇಧಾ ಪಾಟ್ಕರ್, ಸ್ವಾಮಿ ಅಗ್ನಿವೇಶ್, ಯೋಗೇಂದ್ರ ಯಾದವ್ ಮತ್ತಿತರರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಮಂದ್‌ಸೋರ್‌ನಲ್ಲಿ ಸೆಕ್ಷನ್ 144 ಜಾರಿಯಲ್ಲಿರುವ ಕಾರಣ ಅಲ್ಲಿಗೆ ಗುಂಪಾಗಿ ತೆರಳಬಾರದೆಂದು ಸೂಚಿಸಿದರೂ ಸುಮಾರು 40 ಜನರಿದ್ದ ತಂಡ ಮುಂದುವರಿದಾಗ ಅವರನ್ನು ಬಂಧಿಸಲಾಗಿದೆ. ಬಂಧಿತರನ್ನು ಜವೊರಾ ಎಂಬಲ್ಲಿಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಲ್ಲಿ ಮಧ್ಯಪ್ರದೇಶದ ಮಾಜಿ ಶಾಸಕರಾದ ಸುನಿಲಂ, ಕಲ್ಪನಾ ಪರುಲೇಕರ್ ಮತ್ತು ಪರಸ್ ಸಕ್ಲೇಚ ಸೇರಿದ್ದಾರೆ.
ಶಾಂತಿ ಮತ್ತು ಸಹೋದರತೆಯ ವಾತಾವರಣ ನೆಲೆಸಲು ಸಹಾಯ ಮಾಡಲೆಂದು ನಾವು ಬಂದಿದ್ದೆವು. ಆದರೆ ಪೊಲೀಸರು ನಮ್ಮನ್ನು ಮುಂದುವರಿಯಲು ಬಿಡಲಿಲ್ಲ. ತಾವು ನಡೆಸಿರುವ ಅನ್ಯಾಯ ಹೊರಜಗತ್ತಿಗೆ ತಿಳಿಯಬಹುದು ಎಂಬ ಆತಂಕ ಅವರಲ್ಲಿರಬಹುದು ಎಂದು ಸ್ವಾಮಿ ಅಗ್ನಿವೇಶ್ ಪೊಲೀಸರು ಬಂಧಿಸಿದ ಬಳಿಕ ಹೇಳಿದರು.
ನಾವು ನಿಷೇಧಾಜ್ಞೆ ಉಲ್ಲಂಘಿಸಿದೆವು ಎಂಬ ಸುಳ್ಳು ಸುದ್ದಿ ಹಬ್ಬಲಾಗಿದೆ. ಆದರೆ ನಾವು ತಲಾ ನಾಲ್ಕು ಮಂದಿ ಒಂದು ತಂಡವಾಗಿ ತೆರಳಲು ಬಯಸಿದ್ದೆವು ಎಂದು ಯೋಗೇಂದ್ರ ಯಾದವ್ ಟ್ವೀಟ್ ಮಾಡಿದ್ದಾರೆ.
ನಾವು ಯಾರನ್ನೂ ಜಿಲ್ಲೆಯ ಒಳಪ್ರವೇಶಿಸಲು ಬಿಡುತ್ತಿಲ್ಲ. ಒಂದು ಸಣ್ಣ ಮಾತು ಅಥವಾ ಕ್ರಿಯೆ ಆ ಪ್ರದೇಶದಲ್ಲಿ ಮತ್ತೆ ಅಶಾಂತಿಗೆ ಕಾರಣವಾಗಬಹುದು. ಅಲ್ಲಿ ಕ್ರಮೇಣ ಪರಿಸ್ಥಿತಿ ಸಹಜತೆಗೆ ಮರಳುತ್ತಿದೆ ಎಂದು ಡಿಐಜಿ ಅವಿನಾಶ್ ಶರ್ಮ ಹೇಳಿದ್ದಾರೆ.