×
Ad

ಭಟ್ಕಳ: ಮುಂದುವರಿದ ಮಳೆ; ಮನೆಗಳಿಗೆ ನುಗ್ಗಿದ ನೀರು, ಕೃಷಿ ನಾಶ

Update: 2017-06-11 23:32 IST

ಭಟ್ಕಳ, ಜೂ. 11: ತಾಲೂಕಿನಾದ್ಯಂತ ಮುಂಗಾರು ಅಬ್ಬರದಿಂದ ಕೂಡಿದ್ದು ರವಿವಾರವೂ ಮುಂಗಾರು ಮಳೆಯ ಆಕ್ರಮಣ ಮುಂದುವರೆದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ತಾಲೂಕಿನ ಶಿರಾಲಿ ಗ್ರಾಮ ಪಂ. ವ್ಯಾಪ್ತಿಯ ವೆಂಕಟಾಪುರದಲ್ಲಿ ಐಆರ್‌ಬಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ನೀರು ಸರಾಗವಾಗಿ ಹರಿಯದೇ ಮನೆ ಹಾಗೂ ಕೃಷಿ ಭೂಮಿಗಳಿಗೆ ನುಗ್ಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಮಳೆಯ ನೀರು ಹರಿದು ಬಂದು ಆತಂಕಕ್ಕೆ ಸಿಲುಕಿದ ಮನೆಯ ಮಾಲಕರನ್ನು ಲಕ್ಷ್ಮಣ ಭದ್ರಯ್ಯ ದೇವಡಿಗ, ನಾಗೇಶ ಸಣ್ಣ ಹುಡ್ಗ ದೇವಡಿಗ, ಗಜಾನನ ಸಣ್ಣಹುಡ್ಗ ದೇವಡಿಗ, ಪರಮೇಶ್ವರ ಭದ್ರಯ್ಯ ದೇವಡಿಗ ಎಂದು ಗುರುತಿಸಲಾಗಿದೆ. ಪಂಚನಾಮೆ ನಡೆಸಿ ಹಾನಿ ಕಂಡು ಬಂದಲ್ಲಿ ಪರಿಹಾರ ಒದಗಿಸಿಕೊಡುವುದಾಗಿ ಕಂದಾಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಕಡವಿನಕಟ್ಟೆ ಡ್ಯಾಮ್‌ನಿಂದ ಆರಂಭವಾಗಿ ವೆಂಕಟಾಪುರ ಹೊಳೆಯನ್ನು ಸೇರುವ ಹಳ್ಳಕ್ಕೆ ಐಆರ್‌ಬಿ ವತಿಯಿಂದ ಸೇತುವೆಯ ಬಳಿ ನಿರ್ಮಿಸಲಾದ ಅಡ್ಡ ಚರಂಡಿ (ಸಿಡಿ) ಅವೈಜ್ಞಾನಿಕವಾಗಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಹಳ್ಳದ ದಿಕ್ಕನ್ನು ಬದಲಿಸಿರುವುದರಿಂದ ನೀರು ಮುಂದಕ್ಕೆ ಹರಿಯದೇ ಗದ್ದೆಯಲ್ಲಿ ತುಂಬಿಕೊಳ್ಳುತ್ತಿದ್ದು, ಮನೆ, ಹಿತ್ತಲಿನತ್ತ ಧುಮುಕುತ್ತಿದೆ. ಸದರಿ ಸಿಡಿಯನ್ನು ಒಡೆದು ಹಳ್ಳದ ನೈಸರ್ಗಿಕ ಮಾರ್ಗವನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಜನರ ಆತಂಕದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಶಿರಾಲಿ ಗ್ರಾಮ ಪಂ. ಅಧ್ಯಕ್ಷ ವೆಂಕಟೇಶ ನಾಯ್ಕ, ಸದಸ್ಯರಾದ ಮೋಹನ ದೇವಡಿಗ, ಭಾಸ್ಕರ ದೈಮನೆ, ಈಶ್ವರ ಮೊಗೇರ ಮತ್ತಿತರರು ಕಂದಾಯ ಹಾಗೂ ಐಆರ್‌ಬಿ ಅಧಿಕಾರಿಗಳ ವಿರುದ್ಧ ಅಸಮಾಧಾನವನ್ನು ಹೊರ ಹಾಕಿದರು.

ಇಲ್ಲಿನ ಪರಿಸ್ಥಿತಿಯ ಬಗ್ಗೆ ಎರಡೆರಡು ಬಾರಿ ಪಂ. ವತಿಯಿಂದ ಐಆರ್‌ಬಿಗೆ ಲಿಖಿತವಾಗಿ ಬರೆದುಕೊಂಡು ಗಮನ ಸೆಳೆದಿದ್ದೇವೆ. ಆದರೆ ಐಆರ್‌ಬಿ ಅಧಿಕಾರಿಗಳು ನಮ್ಮ ಮನವಿಯನ್ನು ಪರಿಗಣಿಸುತ್ತಿಲ್ಲ. ಇದೀಗ ಮಳೆಗಾಲದಲ್ಲಿ ನೀರು ಮನೆಗಳಿಗೆ ಹರಿದು ಬರುತ್ತಿದೆ. 200 ಕ್ಕೂ ಅಧಿಕ ಎಕರೆ ಕೃಷಿ ಭೂಮಿಯಲ್ಲಿ ನೀರು ತುಂಬಿಕೊಂಡ ಕಾರಣ ಬಿತ್ತಿದ ಬೀಜವೆಲ್ಲ ನೀರುಪಾಲಾಗಿದೆ. ಜನರಿಗೆ ಉತ್ತರ ಕೊಡುವವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಐಆರ್‌ಬಿ ನೌಕರ ದೀಪಕ್ ಕಾಮತ್, ಮುರುಡೇಶ್ವರ ಕಂದಾಯ ನಿರೀಕ್ಷಕ ಚಾಂದ್ ಬಾಷಾ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ನಂತರ ಹಿಟಾಚಿ ಯಂತ್ರವನ್ನು ತರಿಸಿಕೊಂಡು ನಿಂತ ನೀರನ್ನು ಮುಂದಕ್ಕೆ ಹರಿಸಲು ಕ್ರಮ ಕೈಗೊಳ್ಳಲಾಯಿತು. ಬೆಂಗ್ರೆ, ಕಾಯ್ಕಿಣಿ ಗ್ರಾಮ ಪಂ. ವ್ಯಾಪ್ತಿಯ ತೆರ್ನಮಕ್ಕಿಯಲ್ಲಿಯೂ ಐಆರ್‌ಬಿಯವರ ಅಪೂರ್ಣ ಕಾಮಗಾರಿಯಿಂದ ನೀರು ತುಂಬಿಕೊಂಡ ಬಗ್ಗೆ ಮಾಹಿತಿ ಲಭಿಸಿದೆ.

ಧರೆಗುರುಳಿದ ವಿದ್ಯುತ್ ಕಂಬ: ಮಳೆಯ ಅಬ್ಬರಕ್ಕೆ ತಾಲೂಕಿನ ವಿವಿದೆಡೆ 10 ವಿದ್ಯುತ್ ಕಂಬಗಳು ಧರೆಗುರುಳಿವೆ. ತಾಲೂಕಿನ ಪ್ರಮುಖ ವಿದ್ಯುತ್ ಮಾರ್ಗ ಹಾದು ಹೋಗಿರುವ ಮೂಡ ಭಟ್ಕಳ ಹಾಗೂ ಮಣ್ಕುಳಿ ಭಾಗದಲ್ಲಿ ಐಆರ್‌ಬಿ ಅಪೂರ್ಣ ಕಾಮಗಾರಿಯಿಂದಾಗಿ ಮಳೆ ನೀರಿಗೆ ಮಣ್ಣು ಕೊಚ್ಚಿಕೊಂಡು ಹೋಗಿ ಕಂಬಗಳು ಕೆಳಕ್ಕುರುಳಿದ ಪರಿಣಾಮವಾಗಿ ಜನರು ರವಿವಾರ ಮಧ್ಯಾಹ್ನದವರೆಗೂ ವಿದ್ಯುತ್ ಇಲ್ಲದೆ ದಿನ ಕಳೆಯಬೇಕಾಯಿತು.
ಚೌಥನಿಯಲ್ಲಿ ನೆರೆಯ ಭೀತಿ: ಕಳೆದ 2-3 ದಿನಗಳಿಂದ ಎಡೆಬಿಡದ ಮಳೆಯಿಂದಾಗಿ ಚೌಥನಿ ಹೊಳೆಯ ಇಕ್ಕೆಲಗಳಲ್ಲಿ ನೆರೆಯ ಭೀತಿ ಸೃಷ್ಟಿಯಾಯಿತು. ಮನೆ ಮಂದಿ ತುಂಬಿದ ಹೊಳೆಯನ್ನು ನೆನೆದು ಮನೆಯ ಅಂಗಳದಲ್ಲಿಯೇ ಎಚ್ಚರವಹಿಸಿ ಕಾದು ಕುಳಿತಿರುವುದು ಕಂಡು ಬಂತು.

ಮುಂಡಳ್ಳಿ ಹೊಸ್ಮನೆ ಭಾಗದಲ್ಲಿ ರವಿವಾರ ಮುಂಜಾನೆ ರಸ್ತೆ ಹೊಳೆಯಾಗಿ ಬದಲಾದ ಕಾರಣ ವಾಹನ ಸವಾರರು ಪರದಾಡಿದರು. ಪುರಸಭಾ ವ್ಯಾಪ್ತಿಯ ಗುಡ್‌ಲಕ್ ರೋಡ್‌ನಲ್ಲಿ ಕಂಪೌಂಡ್ ಗೋಡೆಯೊಂದು ಕುಸಿದು ಬಿದ್ದ ಪರಿಣಾಮವಾಗಿ ಸಂಚಾರಕ್ಕೆ ತೀವೃ ಅಡಚಣೆಯುಂಟಾಯಿತು. ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣ ಮುಂದುವರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News