ನವಕಲಿಕಾರ್ಥಿಗಳ ಸಾಕ್ಷರ ಸಂಪರ್ಕ ಸಭೆ
ಮಂಗಳೂರು, ಜೂ.12: ಜಿಲ್ಲಾ ಸಾಕ್ಷರ ಸಮಿತಿ, ವಯಸ್ಕರ ಶಿಕ್ಷಣ ಇಲಾಖೆ, ಗ್ರಾಪಂ ಬಳ್ಪಹಾಗೂ ಜನ ಶಿಕ್ಷಣ ಟ್ರಸ್ಟ್ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ನವಕಲಿಕಾರ್ಥಿಗಳ ಸಾಕ್ಷರ ಸಂಪರ್ಕ ಸಭೆಯು ಬಳ್ಪದಲ್ಲಿ ನಡೆಯಿತು.
ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಮಹಿಳೆಯರು ಕಲಿಕೆಯಲ್ಲಿ ಇಷ್ಟು ಆಸಕ್ತಿ ತೋರಿಸುವುದು ಹೆಮ್ಮೆಯ ವಿಚಾರವಾಗಿದೆ. ಆದರ್ಶ ಗ್ರಾಮ ಬರಿ ಕಟ್ಟಡಗಳಿಂದ, ರಸ್ತೆಗಳಿಂದ ಆಗುವುದಿಲ್ಲ. ಬದಲಾಗಿ ಅಲ್ಲಿನ ಎಲ್ಲ ಗ್ರಾಮಸ್ಥರು ಸಾಕ್ಷರರಾಗಿ ಶೋಷಣೆ ಮುಕ್ತವಾಗಿ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ನಿಜವಾದ ಆದರ್ಶ ಗ್ರಾಮದ ಕನಸು ನನಸಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದ.ಕ.ಜಿಪಂ ಸಿಇಒ ಅಧಿಕಾರಿ ಡಾ.ಎಂ.ಆರ್. ರವಿ, ಸ್ವಾಭಿಮಾನದ ಬದುಕು ನಿಮ್ಮದಾಗಬೇಕು. ಅಕ್ಷರ ಜ್ಯೋತಿ ಸದಾ ಬೆಳಗುತ್ತಿದ್ದರೆ ಸಾಧ್ಯತೆಯ ಕದ ತೆರೆಯುತ್ತಾ ಸಾಗುತ್ತದೆ. ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಕಲಿಯಲು ಮುಂದೆ ಬಂದಿರುವುದು, ಯಾವುದೇ ಉಚಿತ ಸವಲತ್ತುಗಳಿಲ್ಲದೇ ಕಲಿಕಾ ಪಯಣ ಆರಂಭಿಸಿರುವುದು ಶ್ಲಾಘನಾರ್ಹ ಎಂದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸುಧಾಕರ ಮಾತನಾಡಿ 309 ಮಂದಿ ನವಕಲಿಕಾರ್ಥಿಗಳು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿದ್ದು, 32 ಮಂದಿ ಸ್ವಯಂಸೇವಕರು, 3 ಮಂದಿ ಸಂಪರ್ಕ ವ್ಯಕ್ತಿಗಳು, ಓರ್ವ ಪ್ರೇರಕಿಯರನ್ನು ಒಳಗೊಂಡ ತಂಡ ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ ಎಂದರು.
ದ.ಕ.ಜಿಪಂ ಉಪ ಕಾರ್ಯದರ್ಶಿ ಎನ್.ಆರ್. ಉಮೇಶ್, ತಾಪಂ ಇಒ ಮಧುಕುಮಾರ್, ಜಿಪಂ ಸದಸ್ಯೆ ಆಶಾ ತಿಮ್ಮಪ್ಪಗೌಡ, ತಾಪಂ ಸದಸ್ಯ ಅಶೋಕ್ ನೆಕ್ರಾಜೆ, ಗ್ರಾಪಂ ಅಧ್ಯಕ್ಷ ಪ್ರಕಾಶ್ ಮುಡ್ನೂರು, ಉಪಾಧ್ಯಕ್ಷೆ ತಾರಾ ರೈ, ಜನಶಿಕ್ಷಣ ಟ್ರಸ್ಟ್‌ನ ಶೀನ ಶೆಟ್ಟಿ ಭಾಗವಹಿಸಿದ್ದರು. ಭಾಗೀರಥಿ ರೈ ಕಾರ್ಯಕ್ರಮ ನಿರೂಪಿಸಿದರು.