×
Ad

ಶಿಕ್ಷಣದಿಂದ ದಲಿತರ ಬದಲಾವಣೆ: ಜಯನ್ ಮಲ್ಪೆ

Update: 2017-06-12 21:37 IST

ಪಡುಬಿದ್ರೆ, ಜೂ.12: ಶಿಕ್ಷಣದಿಂದ ದಲಿತರ ಬದಲಾವಣೆ ಖಚಿತ. ಇತ್ತೀಚಿನ ದಿನಗಳಲ್ಲಿ ಅಕ್ಷರ ಲೋಕದತ್ತ ದಲಿತರು ಮುಂದುವರಿದಿರುವುದು ಶ್ಲಾಘನೀಯ. ಅದಕ್ಕಾಗಿ ದಲಿತ ಸಂಘಟನೆಗಳು ಇನ್ನಷ್ಟು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಯನ್ ಮಲ್ಪೆ ಹೇಳಿದರು.

ಪಡುಬಿದ್ರೆ ಅಂಬೇಡ್ಕರ್ ಭವನದಲ್ಲಿ ಉಡುಪಿ ಜಿಲ್ಲಾ ಗೊಡ್ಡ (ದಲಿತ) ಸಮಾಜ ಸೇವಾ ಸಂಘದ ಪಡುಬಿದ್ರಿ ವಿಭಾಗದ ವತಿಯಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜಯನ್ ಮಾತನಾಡಿದರು.

ದಲಿತೋದ್ಧಾರಕ ಡಾ.ಅಂಬೇಡ್ಕರ್ ಎಂದಿಗೂ ಮೀಸಲಾತಿ ಪರವಾಗಿರಲಿಲ್ಲ. ನಮಗೆ ಮೀಸಲಾತಿಯ ಅಗತ್ಯವಿಲ್ಲ. ಅಂಬೇಡ್ಕರ್‌ ರವರು ದ್ವಿಮತದಾನ ಪದ್ಧತಿ ಜಾರಿಗೆ ಆಗ್ರಹಿಸಿದ್ದರು. ಅದು ಜಾರಿಗೆ ಬರುತ್ತಿದ್ದರೆ ದಲಿತರು ಅಂದೇ ಸಮಾನತೆ ಯನ್ನು ಸಾಧಿಸುತ್ತಿದ್ದರು. ಸಮಾನತೆಗಾಗಿ, ಸೌಲಭ್ಯಕ್ಕಾಗಿ ದಲಿತರು ಬೇಧ ಮರೆತು ಒಂದಾಗಬೇಕು ಎಂದವರು ಹೇಳಿದರು.

ಪ್ರತಿಭಾ ಪುರಸ್ಕಾರ: ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ವಿದ್ಯಾರ್ಥಿವೇತನ ನೀಡುವ ಮೂಲಕ ಗೌರವಿಸಲಾಯಿತು.
 

ಸನ್ಮಾನ: ಆಕಾಶವಾಣಿಯ ಜಾನಪದ ಕಲಾವಿದೆ ಸರೋಜಿನಿ ಮೂಳೂರು, ಜಾನಪದ ನೃತ್ಯ ಸಾಧಕರಾದ ಕಾರ್ತಿಕ್ ಪಡುಬಿದ್ರೆ ಮತ್ತು ಶರತ್ ಹೆಜಮಾಡಿಯವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಉಡುಪಿ ಜಿಲ್ಲಾ ಗೊಡ್ಡ(ದಲಿತ)ಸಮಾಜ ಸೇವಾ ಸಂಘದ ಪಡುಬಿದ್ರಿ ವಿಭಾಗದ ಅಧ್ಯಕ್ಷ ಪಿ.ಕೃಷ್ಣ ಬಂಗೇರ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಜೇಸಿಐ ಪಡುಬಿದ್ರಿ ಅಧ್ಯಕ್ಷ ಪ್ರಸನ್ನ ಕುಮಾರ್, ಪಡುಬಿದ್ರೆ ರೋಟರಿ ಕ್ಲಬ್ ಅಧ್ಯಕ್ಷ ಹಮೀದ್ ಪಡುಬಿದ್ರೆ, ದಲಿತ ಹೋರಾಟಗಾರ ಕೆ.ಸುಂದರ ಕಪ್ಪೆಟ್ಟು ಮುಖ್ಯ ಅತಿಥಿಗಳಾಗಿದ್ದರು.

ವಿಜಯ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ನ್ಯಾಯವಾದಿ ರಾಜೇಶ್ ಪಡುಬಿದ್ರಿ ಪ್ರಸ್ತಾವಿಸಿದರು. ಕೋಶಾಧಿಕಾರಿ ಸದಾನಂದ ಕೋಟ್ಯಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News