ಓದುವ ವಯಸ್ಸಿನ ಮಕ್ಕಳನ್ನು ಕಾರ್ಮಿಕರನ್ನಾಗಿ ಬಳಕೆ ಅಪರಾಧ-ನ್ಯಾಯಾಧೀಶ ಸಿ.ಕೆ.ಬಸವರಾಜ್

Update: 2017-06-12 16:14 GMT

ಪುತ್ತೂರು, ಜೂ. 12: ಓದುವ ವಯಸ್ಸಿನಲ್ಲಿರುವ ಮಕ್ಕಳನ್ನು ಕಾರ್ಮಿಕರನ್ನಾಗಿ ಬಳಸಿಕೊಂಡು ಶೋಷಣೆ ಮಾಡುವುದು ಅಪರಾಧವಾಗಿದ್ದು, ಮಕ್ಕಳನ್ನು ಹೊರರಾಜ್ಯಗಳಿಗೆ ಸಾಗಾಣೆ ಮಾಡುವುದನ್ನು, ಕಾನೂನು ಬಾಹಿರ ಚಟುವಟಿಕೆಗಳಿಗೆ ತೊಡಗಿಸುವುದನ್ನು ತಡೆಯಬೇಕಾದರೆ ಮಕ್ಕಳಲ್ಲಿ ಕಾನೂನಿನ ಅರಿವು ಮೂಡಬೇಕು ಎಂದು ಪುತ್ತೂರು ನ್ಯಾಯಾಲಯದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಕೆ.ಬಸವರಾಜ್ ಹೇಳಿದರು.

ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿ, ಪುತ್ತೂರು ವಕೀಲರ ಸಂಘ, ಕಾರ್ಮಿಕ ಇಲಾಖೆ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ, ಪುತ್ತೂರಿನ ತೆಂಕಿಲ ವಿವೇಕನಗರದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ, ಅಂತರ್‌ರಾಷ್ಟ್ರೀಯ ಬಾಲಕಾರ್ಮಿಕರ ವಿರೋಧಿ ದಿನಾಚರಣೆ ಅಂಗವಾಗಿ ಸೋಮವಾರ ನಡೆದ ಕಾನೂನು ಮಾಹಿತಿ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಬಳಸಿಕೊಂಡವರಿಗೆ 2 ವರ್ಷದ ತನಕ ಜೈಲು ಶಿಕ್ಷೆ, ರೂ.20ಸಾವಿರ ದಂಡವಿದ್ದರೂ ಭಾರತದಲ್ಲಿ ಶೋಷಣೆ ಕಡಿಯಾಗಿಲ್ಲ ಎಂದು ಅವರು ತಿಳಿಸಿದರು.

ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರಿನ ಹಿರಿಯ ಕಾರ್ಮಿಕ ನಿರೀಕ್ಷ ರಾಮಚಂದ್ರ ಹೆಚ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಂಚಾಲಕ ವಿನೋದ್ ಕುಮಾರ್ ರೈ ಅತಿಥಿಯಾಗಿ ಮಾತನಾಡಿದರು. 

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಮಂಜುನಾಥ್ ಎನ್.ಎಸ್, ತಾಲೂಕು ಕಾನೂನು ಸೇವೆಗಳ ಸಮಿತಿಯ ನಾರಾಯಣ ರೈ ಕುಕ್ಕುವಳ್ಳಿ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ ಉಪಸ್ಥಿತರಿದ್ದರು. ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷ ಚಿದಾನಂದ ಕಾಮತ್ ಸ್ವಾಗತಿಸಿದರು. ಸಹನಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News