ಮುಂದುವರಿದ ಮಳೆ; ಮನೆಗಳಿಗೆ ಹಾನಿ
ಉಡುಪಿ, ಜೂ.12: ಜಿಲ್ಲೆಯ ಮುಂಗಾರು ಮಳೆಯ ತೀವ್ರತೆ ಮುಂದುವರಿದಿದ್ದು, ಅಪರಾಹ್ನದ ವೇಳೆ ನಿಧಾನಗೊಂಡ ಮಳೆ, ಸಂಜೆಯ ವೇಳೆ ಮತ್ತೆ ತೀವ್ರತೆಯನ್ನು ಪಡೆದಿದೆ. ಜಿಲ್ಲೆಯ ನಾನಾ ಕಡೆಗಳಿಂದ ಮನೆ, ಸೊತ್ತುಗಳಿಗೆ ಹಾನಿಯಾದ ವರದಿಗಳು ಬಂದಿವೆ.
ಕಾರ್ಕಳ ತಾಲೂಕು ಸಾಣೂರು ಗ್ರಾಮದ ನಾರಾಯಣ ಆಚಾರ್ಯ ಎಂಬವರ ಮನೆಯ ಒಂದು ಭಾಗದ ಮೇಲೆ ಪಕ್ಕದ ಮನೆಯ ಕಾಂಪೌಂಡ್ ಕುಸಿದು ಭಾಗಶ: ಹಾನಿಗೊಂಡಿದೆ. ಇದರಿಂದ 10,000 ರೂ. ನಷ್ಟದ ಅಂದಾಜು ಮಾಡಲಾಗಿದೆ. ಅಂಡಾರು ಗ್ರಾಮದ ಮುಟ್ಲುಪಾಡಿ ಎಂಬಲ್ಲಿ ಸುಜಾತ ಶೆಟ್ಟಿ ಎಂಬವರ ಮನೆಯ ಬಾವಿ ಕಳೆದ ರಾತ್ರಿಯ ಭಾರೀ ಮಳೆಗೆ ಸಂಪೂರ್ಣವಾಗಿ ಕುಸಿದು ಹೋಗಿದೆ. ಇದರಿಂದ ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಕುಂದಾಪುರ ತಾಲೂಕು ಅಸೋಡು ಗ್ರಾಮದ ಮಹಾಬಲ ಪೂಜಾರಿಯವರ ಪಕ್ಕಾ ಮನೆಯ ಮೇಲೆ ಹಲಸಿನ ಮರ ಬಿದ್ದು ಭಾಗಶ: ಹಾನಿಯಾಗಿದ್ದು 15,000ರೂ. ನಷ್ಟವಾಗಿದೆ. ಕೆದೂರು ಗ್ರಾಮದ ಶಾನಾಡಿಯ ನಾಗು ಎಂಬವರ ಮನೆ ಮೇಲೆ ಮರ ಬಿದ್ದು 15,000ರೂ. ನಷ್ಟದ ಅಂದಾಜು ಮಾಡಲಾಗಿದೆ.
ಕಂಚಿಗೋಡು ಗ್ರಾಮದ ಹೊಸಾಡು ಉಮಾನಾಥ ಖಾರ್ವಿ ಎಂಬವರ ವಾಸದ ಮನೆ ಮೇಲೆ ಮರ ಬಿದ್ದು 20,000ರೂ., ಅದೇ ಗ್ರಾಮದ ನೀಲು ದೇವಾಡಿಗರ ಮನೆ ಗಾಳಿ-ಮಳೆಗೆ ಭಾಗಶ: ಕುಸಿದಿದ್ದು 60,000ರೂ. ನಷ್ಟವಾಗಿದೆ. 76 ಹಾಲಾಡಿ ಗ್ರಾಮದ ಮೂಡುಬಳ್ಳಿಯ ರತ್ನ ಶೆಡ್ತಿ ಎಂಬವರ ಮನೆ ಗೋಡೆ ಬಿದ್ದು ತಳಪಾಯಕ್ಕೆ ಹಾನಿಯಾಗಿದ್ದು 60,000ರೂ. ನಷ್ಟ ಸಂಭವಿಸಿದೆ.
ಕೊಚ್ಚಿ ಹೋದ ಯುವಕ: ಕುಂದಾಪುರ ತಾಲೂಕು ಉಪ್ಪುಂದ ಸಮೀಪದ ಬಿಜೂರಿನ ಹರೀಶ್ (34) ಎಂಬ ಯುವಕ ನಿನ್ನೆ ಸಂಜೆ ವೇಳೆ ಗದ್ದೆ ಕೆಲಸದಿಂದ ಮನೆಗೆ ಮರಳುವಾಗ ಮಳೆ ನೀರಿನಿಂದ ತುಂಬಿ ಹರಿಯುತಿದ್ದ ತೋಡಿಗೆ ಅಕಸ್ಮಿಕವಾಗಿ ಬಿದ್ದು ಕೊಚ್ಚಿಕೊಂಡು ಹೋಗಿದ್ದು, ಇಂದು ಸಂಜೆಯವರೆಗೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.