×
Ad

ಮೂರನೆ ಬಾರಿಗೆ ಒತ್ತಿನೆಣೆ ಗುಡ್ಡ ಕುಸಿತ, ಸಂಚಾರ ಸ್ಥಗಿತ: ಜಿಲ್ಲಾಧಿಕಾರಿ ಭೇಟಿ

Update: 2017-06-12 21:54 IST

ಬೈಂದೂರು, ಜೂ.12: ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿದಿರುವ ಪ್ರದೇಶಕ್ಕೆ ಇಂದು ಭೇಟಿ ನೀಡಿರುವ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಗುಡ್ಡ ಜರಿಯದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗುಡ್ಡದ ಮೇಲೆ ಹರಿದು ಬರುವ ನೀರನ್ನು ತಡೆಯಲು ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಗುಡ್ಡದ ಮೇಲೆ ಇರುವ ಕಲ್ಲುಗಳನ್ನು ತೆರವುಗೊಳಿಸಬೇಕು. ಪರ್ಯಾಯ ಮಾರ್ಗವಾಗಿ ದೊಂಬೆ- ಕರಾವಳಿ ರಸ್ತೆಯ ಮತ್ತು ಬೈಂದೂರು ರೈಲ್ವೆ ನಿಲ್ದಾಣದ ಬಳಿಯ ರಸ್ತೆಯ ಡಾಮರೀಕರಣ ಮಾಡಬೇಕು ಎಂದ ಜಿಲ್ಲಾಧಿಕಾರಿಗಳು ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪೆನಿಯ ಯೋಜನಾ ಪ್ರಬಂಧಕ ಯೊಗೇಂದ್ರಪ್ಪ ಅವರಿಗೆ ಸ್ಪಷ್ಟ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾನಾಗ್, ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ್ ಗೌರಯ್ಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮೊದಲಾದವರು ಹಾಜರಿದ್ದರು.

ಮೂರನೆ ಬಾರಿಗೆ ಕುಸಿತ: ನಿನ್ನೆ ರಾತ್ರಿಯಿಂದ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಒತ್ತಿನೆಣೆ ಗುಡ್ಡ ಇಂದು ಮತ್ತೆ ಮೂರನೆ ಬಾರಿಗೆ ಕುಸಿದು ಸಂಚಾರಕ್ಕೆ ತೊಂದರೆ ಉಂಟಾಯಿತು.

ಬೆಳಗ್ಗೆ 10ಗಂಟೆ ಸುಮಾರಿಗೆ ಅದೇ ಭಾಗ ಗುಡ್ಡ ಕುಸಿದು ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತು. ಬಳಿಕ ಪರ್ಯಾಯ ರಸ್ತೆಯಲ್ಲಿ ಬಸ್ ಹಾಗೂ ಖಾಸಗಿ ವಾಹನಗಳು ಸಂಚರಿಸಲು ಅನುವು ಮಾಡಿ ಕೊಡಲಾಯಿತು. ಭಾರೀ ವಾಹನಗಳಾದ ಲಾರಿಗಳು ರಸ್ತೆಯಲ್ಲೇ ನಿಂತಿದ್ದವು.

ಬಳಿಕ ಎರಡು ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸುವ ಕಾರ್ಯ ಮಾಡಲಾಯಿತು. ಮಳೆ ಹೆಚ್ಚು ಇಲ್ಲದ ಕಾರಣ ಒಂದು ಗಂಟೆಯೊಳಗೆ ಮಣ್ಣು ರಸ್ತೆಯಿಂದ ತೆಗೆಯಲಾಯಿತು. ಬಳಿಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು ಎಂದು ಬೈಂದೂರು ತಹಶೀಲ್ದಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News