ಶಿಲ್ಪಾ ಶೆಟ್ಟಿ, ರಾಜ್‌ಕುಂದ್ರ ವಿದೇಶ ಪ್ರವಾಸಕ್ಕೆ ಅನುಮತಿ
ಥಾಣೆ, ಜೂ.12: ವಂಚನೆ ಪ್ರಕರಣವೊಂದರಲ್ಲಿ ಆರೋಪಿಗಳಾಗಿರುವ ಉದ್ಯಮಿ ರಾಜ್ ಕುಂದ್ರ ಮತ್ತು ಅವರ ಪತ್ನಿ, ಸಿನೆಮ ನಟಿ ಶಿಲ್ಪಾ ಶೆಟ್ಟಿ ವಿದೇಶ ಪ್ರವಾಸಕ್ಕೆ ಇಲ್ಲಿಯ ಸೆಷನ್ಸ್ ಕೋರ್ಟ್ ಅನುಮತಿ ನೀಡಿದೆ.
ಜುಲೈ 14-15ರಂದು ನಡೆಯುವ ಐಐಎಫ್‌ಎ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಮತ್ತು ಉದ್ಯಮಕ್ಕೆ ಸಂಬಂಧಿಸಿ ಕೆಲವು ಪ್ರಮುಖ ಸಭೆಗಳಲ್ಲಿ ಪಾಲ್ಗೊಳ್ಳಬೇಕಿರುವುದರಿಂದ ಜೂನ್ 12ರಿಂದ ಜುಲೈ 21ರವರೆಗೆ ಬ್ರಿಟನ್ ಮತ್ತು ಅಮೆರಿಕಕ್ಕೆ ತೆರಳಲು ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಧೀಶ ಎಸ್.ಸಿ.ಖಲಿಪೆ ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದರು.
‘ಬೆಸ್ಟ್ ಡೀಲ್ ಟಿವಿ(ಬಿಡಿಟಿವಿ) ಮೂಲಕ ತಾನು ಎಪ್ರಿಲ್ 26ರಂದು 24 ಲಕ್ಷ ರೂ. ಮೊತ್ತದ ಬೆಡ್‌ಶೀಟ್‌ಗಳನ್ನು ಮಾರಾಟ ಮಾಡಿದ್ದೆ. ಆದರೆ ತನಗೆ ಈ ಮೊತ್ತ ಪಾವತಿಸದೆ ಬಿಡಿಟಿವಿ ವಂಚಿಸಿದೆ ಎಂದು ‘ಭಲೋಟಿಯ ಎಕ್ಸ್‌ಪೋರ್ಟ್ಸ್’ ಸಂಸ್ಥೆಯ ಮಾಲಕ ರವಿ ಭಲೋಟಿಯ ಎಂಬವರು ಭಿವಂಡಿಯ ಕೋಂಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಇದರಂತೆ ಬಿಡಿಟಿವಿಯ ಮಾಜಿ ನಿರ್ದೇಶಕರಾದ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರ, ದರ್ಶಿತ್ ಶಾ, ವೇದಾಂತ್ ಬಾಲಿ ಮತ್ತು ಉದಯ್ ಕೊಠಾರಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಮೇ 9ರಂದು ಥಾಣೆಯ ಸೆಷನ್ಸ್ ಕೋರ್ಟ್ ಇವರಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ದೇಶ ಬಿಟ್ಟು ತೆರಳದಂತೆ ಷರತ್ತು ವಿಧಿಸಿತ್ತು.