ಅವ್ಯವಸ್ಥೆಯಿಂದ ಪಕ್ಷವನ್ನು ಹೊರತರುವೆ: ತೆರೇಸಾ

Update: 2017-06-13 11:46 GMT

ಲಂಡನ್, ಜೂ. 13: ನಿಮಗೆ ಬೇಕಾದಷ್ಟು ದಿನ ಮಾತ್ರ ನಾನು ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಬ್ರಿಟನ್ ಪ್ರಧಾನಿ ತೆರೇಸಾ ಮೇ ಸೋಮವಾರ ತನ್ನ ಕನ್ಸರ್ವೇಟಿವ್ ಪಕ್ಷದ ಸಂಸದರನ್ನುದ್ದೇಶಿಸಿ ಹೇಳಿದರು.

ಪ್ರಬಲ ಜನಾದೇಶವನ್ನು ನಿರೀಕ್ಷಿಸಿ ಮಧ್ಯಾಂತರ ಚುನಾವಣೆಯನ್ನು ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳುವ ಹುಚ್ಚು ಸಾಹಸಕ್ಕೆ ಕೈಹಾಕಿದ್ದ ತೆರೇಸಾ, ಅಂತಿಮವಾಗಿ ಅದರಲ್ಲಿ ಸೋಲು ಕಂಡಿದ್ದಾರೆ. ಚುನಾವಣೆಯಲ್ಲಿ ಅವರ ಪಕ್ಷ ಹೊಂದಿದ್ದ ಬಹುಮತವೇ ಕಳೆದುಹೋಗಿದೆ.

ಕಳೆದ ವರ್ಷದ ಜೂನ್ ತಿಂಗಳಲ್ಲಿ ನಡೆದ ‘ಬ್ರೆಕ್ಸಿಟ್’ ಮತದಾನದಲ್ಲಿ ಜನರು ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರುವ ಪರವಾಗಿ ಮತ ಹಾಕಿದ್ದರು. ಆ ಬಳಿಕ ಬ್ರಿಟನ್ ರಾಜಕೀಯದಲ್ಲಿ ತಲೆದೋರಿದ ಬಿಕ್ಕಟ್ಟು ಮಧ್ಯಾಂತರ ಚುನಾವಣೆಯ ಬಳಿಕ ಇನ್ನಷ್ಟು ಜಟಿಲವಾಗಿದೆ.

ಮುಂದಿನ ವಾರ ‘ಬ್ರೆಕ್ಸಿಟ್’ ಮಾತುಕತೆ ಹೇಗೆ ಆರಂಭಗೊಳ್ಳುತ್ತದೆ ಎಂಬ ಪ್ರಶ್ನೆ ಐರೋಪ್ಯ ಒಕ್ಕೂಟದ ನಾಯಕರಲ್ಲಿದೆ.

ಬ್ರೆಕ್ಸಿಟ್ ಮಾತುಕತೆಗಳನ್ನು ಪ್ರಭಾವಶಾಲಿಯಾಗಿ ನಡೆಸಲು ಪ್ರಬಲ ಜನಾದೇಶವನ್ನು ನಿರೀಕ್ಷಿಸಿ ತೆರೇಸಾ ಮಧ್ಯಾಂತ ಚುನಾವಣೆಯನ್ನು ನಡೆಸುವ ಸಾಹಸಕ್ಕೆ ಕೈಹಾಕಿದ್ದರು.

ಅವರೀಗ ಸರಕಾರ ರಚಿಸುವುದಕ್ಕಾಗಿ ಯುರೋಪ್ ಬಗ್ಗೆ ಭೀತಿ ಹೊಂದಿರುವ ನಾರ್ದರ್ನ್ ಐರಿಶ್ ಪ್ರೊಟೆಸ್ಟಂಟ್ ಪಕ್ಷದ ಬೆಂಬಲ ಪಡೆಯುವುದಕ್ಕಾಗಿ ಮಾತುಕತೆಯಲ್ಲಿ ತೊಡಗಿದ್ದಾರೆ. ಆ ಪಕ್ಷವು 10 ಸಂಸದೀಯ ಸ್ಥಾನಗಳನ್ನು ಹೊಂದಿದೆ.

 ‘‘ನಾವು ಈ ಅವ್ಯವಸ್ಥೆಗೆ ಹೊರಳಲು ನಾನೇ ಕಾರಣ. ಹಾಗಾಗಿ, ಇದರಿಂದ ನಮ್ಮನ್ನು ಹೊರಗೆ ಕೊಂಡೊಯ್ಯುವ ವ್ಯಕ್ತಿಯೂ ನಾನೇ ಆಗಿರುತ್ತೇನೆ’’ ಎಂದು ಪ್ರಧಾನಿ ಹೇಳಿದರು ಎಂದು ಸಭೆಯ ಬಳಿಕ ಕನ್ಸರ್ವೇಟಿವ್ ಸಂಸದರೊಬ್ಬರು ತಿಳಿಸಿದರು.

ಆಡಳಿತ ಪಕ್ಷ, ಪ್ರತಿಪಕ್ಷ ಮಾತುಕತೆ

ಬ್ರಿಟನ್‌ನ ಕನ್ಸರ್ವೇಟಿವ್ ಸರಕಾರದ ಹಿರಿಯ ಸಚಿವರು ಮತ್ತು ಪ್ರಧಾನ ಪ್ರತಿಪಕ್ಷ ಲೇಬರ್ ಪಕ್ಷದ ಸದಸ್ಯರು ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ (ಬ್ರೆಕ್ಸಿಟ್) ಪ್ರಕ್ರಿಯೆಯನ್ನು ಸುಲಲಿತಗೊಳಿಸುವ ಬಗ್ಗೆ ರಹಸ್ಯ ಮಾತುಕತೆಗಳನ್ನು ನಡೆಸಿದ್ದಾರೆ ಎಂದು ‘ಡೇಲಿ ಟೆಲಿಗ್ರಾಫ್’ ಮಂಗಳವಾರ ವರದಿ ಮಾಡಿದೆ.

ವಲಸೆ, ಐರೋಪ್ಯ ಕಸ್ಟಂಸ್ ಒಕ್ಕೂಟ ಮತ್ತು ಏಕ ಮಾರುಕಟ್ಟೆ ವಿಷಯಗಳಲ್ಲಿ ವಿನಾಯಿತಿ ಪಡೆಯುವಂತೆ ತೆರೇಸಾ ಮೇಲೆ ಒತ್ತಡ ಹೇರುವುದಕ್ಕಾಗಿ ಈ ಮಾತುಕತೆ ನಡೆದಿದೆ ಎಂದು ಪತ್ರಿಕೆ ಹೇಳಿದೆ. ಮಾತುಕತೆಯಲ್ಲಿ ಪ್ರಧಾನಿ ತೆರೇಸಾ ಮೇ ಸಂಪುಟದ ಹಿರಿಯ ಸದಸ್ಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News