ಮ್ಯೂನಿಕ್: ಪೊಲೀಸ್ ಪಿಸ್ತೂಲ್ ಕಸಿದು ಗುಂಡು ಹಾರಾಟ

Update: 2017-06-13 12:05 GMT

ಮ್ಯೂನಿಕ್ (ಜರ್ಮನಿ), ಜೂ. 13: ಜರ್ಮನಿಯ ಮ್ಯೂನಿಕ್ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಮುಂಜಾನೆ ವ್ಯಕ್ತಿಯೋರ್ವ ಮಹಿಳಾ ಪೊಲೀಸ್ ಅಧಿಕಾರಿಯ ಪಿಸ್ತೂಲ್ ಕಸಿದುಕೊಂಡು ಅವರ ತಲೆಗೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದರು. ಘಟನೆಯಲ್ಲಿ ಪಕ್ಕದಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.

ಅಂಟರ್‌ಫೋಹರಿಂಗ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಪೊಲೀಸ್ ಅಧಿಕಾರಿಯ ಪರಿಸ್ಥಿತಿ ಗಂಭೀರವಾಗಿದೆ ಹಾಗೂ ಇತರ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ಮ್ಯೂನಿಕ್ ಪೊಲೀಸ್ ವಕ್ತಾರ ಮಾರ್ಕಸ್ ಡ ಗ್ಲೋರಿಯ ಮಾರ್ಟಿನ್ಸ್ ಹೇಳಿದರು.

ಆದಾಗ್ಯೂ, ಈ ಘಟನೆಯ ಹಿಂದೆ ‘ರಾಜಕೀಯ ಅಥವಾ ಧಾರ್ಮಿಕ’ ಉದ್ದೇಶವಿರುದ ಬಗ್ಗೆ ಯಾವುದೇ ಸೂಚನೆಯಿಲ್ಲ ಎಂದು ಬಳಿಕ ಮಾರ್ಟಿನ್ಸ್ ಸುದ್ದಿಗಾರರಿಗೆ ತಿಳಿಸಿದರು.

‘‘ದುಷ್ಕರ್ಮಿಯು ವೈಯಕ್ತಿಕ ಕಾರಣಗಳಿಂದ ಹೀಗೆ ಮಾಡಿದ್ದಾನೆ. ಇದರಲ್ಲಿ ಯಾವುದೇ ರಾಜಕೀಯ ಅಥವಾ ಧಾರ್ಮಿಕ ಹಿನ್ನೆಲೆ ಇಲ್ಲ’’ ಎಂದರು.

ರೈಲೊಂದು ಬರುತ್ತಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ಓರ್ವ ಪೊಲೀಸ್ ಅಧಿಕಾರಿಯನ್ನು ರೈಲಿನ ಎದುರು ತಳ್ಳಿದನು ಎನ್ನಲಾಗಿದೆ. ಆಗ ತಳ್ಳಾಟ ನಡೆದಿದ್ದು ಆತನು ಮಹಿಳಾ ಪೊಲೀಸ್ ಅಧಿಕಾರಿಯ ಬಂದೂಕನ್ನು ಸೆಳೆದುಕೊಂಡನು ಹಾಗೂ ಗುಂಡು ಹಾರಿಸಿದನು ಎಂದು ಪೊಲೀಸರು ಹೇಳಿದರು.

ನಿಲ್ದಾಣದಲ್ಲಿದ್ದ ಇತರ ಇಬ್ಬರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರಾದರೂ, ಅಪಾಯದಿಂದ ಪಾರಾಗಿದ್ದಾರೆ.

‘‘ಆಕ್ರಮಣಕಾರಿಯನ್ನು ಬಂಧಿಸಲಾಗಿದೆ. ಆತನೂ ಗಾಯಗೊಂಡಿದ್ದಾನೆ. ಈ ಘಟನೆಯಲ್ಲಿ ಇತರರು ಇರುವ ಸೂಚನೆಗಳಿಲ್ಲ’’ ಎಂದು ಇನ್ನೊಂದು ಪೊಲೀಸ್ ಟ್ವೀಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News