×
Ad

ಸೆಪ್ಟಂಬರ್‌ನಲ್ಲಿ ಅಡ್ಡಹೊಳೆ-ಬಿ.ಸಿ.ರೋಡ್ ಚತುಷ್ಪಥ ಕಾಮಗಾರಿ ಆರಂಭ; 65 ಕಿ.ಮೀ. ಉದ್ದದ ಕಾಂಕ್ರೀಟ್ ರಸ್ತೆ

Update: 2017-06-13 17:37 IST

ಮಂಗಳೂರು, ಜೂ.13: ಗುಂಡ್ಯ ಸಮೀಪದ ಅಡ್ಡಹೊಳೆಯಿಂದ ಬಿ.ಸಿ.ರೋಡ್‌ವರೆಗಿನ 65 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಸೆಪ್ಟಂಬರ್ ತಿಂಗಳಲ್ಲಿ ಆರಂಭಗೊಳ್ಳಲಿದ್ದು, ಭೂಸ್ವಾಧೀನ ಪ್ರಕ್ರಿಯೆ 92.93 ರಷ್ಟು ಪೂರ್ಣಗೊಂಡಿದೆ.

ಸಂಸದ ನಳಿನ್ ಕುಮಾರ ಕಟೀಲ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ನರೇಗಾ ಹಾಗೂ ವಿವಿಧ ಕೇಂದ್ರ ಅನುದಾನಿತ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಭೂಸ್ವಾಧೀನ ಮತ್ತು ಸಕ್ಷಮ ಪ್ರಾಧಿಕಾರದ ಅಧಿಕಾರಿ ಮಂಜುನಾಥ್ ಈ ಮಾಹಿತಿ ನೀಡಿದರು.

ಚತುಷ್ಪಥ ಕಾಮಗಾರಿಗಾಗಿ ಒಟ್ಟು 270.65 ಹೆಕ್ಟೇರ್ ಭೂಮಿ  ಸ್ವಾಧೀನ ಪಡಿಸಬೇಕಾಗಿದ್ದು, ಈಗಾಗಲೇ 251.54 ಹೆಕ್ಟೇರ್‌ ಭೂಮಿ ಸ್ವಾಧೀನಗೊಂಡಿದೆ. ಉಳಿದಂತೆ 15.02 ಹೆಕ್ಟೇರ್ ಭೂಮಿಯ ಸ್ವಾಧೀನ ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.

ಕಾಮಗಾರಿಗಾಗಿ ಉಪ್ಪಿನಂಗಡಿಯಿಂದ ಗುಂಡ್ಯದವರೆಗೆ ಸುಮಾರು 7000 ಮರಗಳನ್ನು ಕಡಿಯಬೇಕಾಗಿದ್ದು, ಈಗಾಗಲೇ 4500 ಮರಗಳನ್ನು ಕಡಿಯಲಾಗಿದೆ. ದಿನಕ್ಕೆ 50ರಂತೆ ಮರಗಳನ್ನು ಕಡಿಯಲಾಗುತ್ತಿದ್ದು, ಇದಕ್ಕಾಗಿ ದಿನದ 6ರಿಂದ 7 ಗಂಟೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಪಾಣೆಮಂಗಳೂರು, ನರಿಕೊಂಬು ಹಾಗೂ ಕಲ್ಲಡ್ಕ ಬಳಿ ಭೂಸ್ವಾಧೀನ ಕಾಮಗಾರಿ ಬಾಕಿ ಇದೆ. ಗುಂಡ್ಯ ಹೊಳೆ ಬಳಿ ಕಲ್ಲುಬಂಡೆ ಒಡೆಯುವ ಕಾರ್ಯ ನಡೆಯಲಿದೆ. ಈ ಚತುಷ್ಪಥ ಕಾಮಗಾರಿಗೆ ಒಳಪಡುವ ಸರ್ವಿಸ್ ರಸ್ತೆಗಳೂ ಕಾಂಕ್ರಿಟೀಕರಣಗೊಳ್ಳಲಿವೆ. ಪ್ರತಿದಿನ ಅರ್ಧ ಕಿ.ಮೀ. ರಸ್ತೆ ಕಾಮಗಾರಿ ಗುರಿ ಹೊಂದಲಾಗಿದೆ ಎಂದು ಕಾಮಗಾರಿ ನಡೆಸಲಿರುವ ಎಲ್‌ಎನ್‌ಟಿ ಸಂಸ್ಥೆಯ ಯೋಜನಾ ಅಕಾರಿ ವಾದಿರಾಜ ಬಿ. ಕಟ್ಟಿ ಸಭೆಗೆ ಮಾಹಿತಿ ನೀಡಿದರು.

ತೊಕ್ಕೊಟ್ಟು ಫ್ಲೈ ಓವರ್ ಜನವರಿಗೆ: ಮಾರ್ಚ್‌ಗೆ ಪಂಪ್‌ವೆಲ್ ಪೂರ್ಣ
ಪಂಪ್‌ವೆಲ್ ಫ್ಲೈ ಓವರ್ ಕಾಮಗಾರಿ ಜೂನ್‌ನೊಳಗೆ ಪೂರ್ಣಗೊಳಿಸುವುದಾಗಿ ಹೇಳಿಕೆ ನೀಡಿದ್ದರೂ ಕಾಮಗಾರಿ ವಿಳಂಬ ಗೊಂಡಿರುವ ಬಗ್ಗೆ ಸಂಸದ ನಳಿನ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಕಾರದ ಅಧಿಕಾರಿ, ನವಯುಗ್ ಏಜೆನ್ಸಿಯವರ ಹಣಕಾಸಿನ ತೊಂದರೆಯಿಂದ ಕಾಮಗಾರಿ ವಿಳಂಬವಾಗಿದೆ. ಮುಂದಿನ ಮಾರ್ಚ್ (2018)ನೊಳಗೆ ಪಂಪ್‌ವೆಲ್ ಮೇಲ್ಸೇತುವೆ ಪೂರ್ಣಗೊಳ್ಳಲಿದ್ದು, ತೊಕ್ಕೊಟ್ಟು ಮೇಲ್ಸೇತುವೆ ಜನವರಿಗೆ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದರು.

ಹೈವೇಯಲ್ಲಿರುವ ಅಂಗಡಿ ತೆರವು, ಬಸ್ಸು ನಿಲ್ದಾಣ ಒಡೆಯಲು ಸೂಚನೆ
ಹೆದ್ದಾರಿ ಬದಿಗಳಲ್ಲಿರುವ ಅಂಗಡಿಗಲನ್ನು ತೆರವುಗೊಳಿಸಬೇಕು ಹಾಗೂ ಬಸ್ಸು ನಿಲ್ದಾಣಗಳನ್ನು ಒಡೆಯಬೇಕು. ಈ ಕಾರ್ಯವನ್ನು ಪೊಲೀಸರ ನೆರವಿನೊಂದಿಗೆ ಶೀಘ್ರವೇ ಮಾಡಿ ಎಂದು ಸಂಸದ ನಳಿನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ: ಎನ್‌ಜಿಒ ಸಂಸ್ಥೆಗೆ ತರಾಟೆ

ಪ್ರಧಾನ ಮಂತ್ರಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಡಿ ತರಬೇತಿಗೆ ಆಯ್ಕೆಯಾಗಿರುವ ಸರಕಾರೇತರ ಸಂಸ್ಥೆಯ (ಎನ್‌ಜಿಒ) ಕಾರ್ಯನಿರ್ವಹಣೆ ಉತ್ತಮವಾಗಿಲ್ಲ ಎಂದು ಸಂಸದ ನಳಿನ್ ಸಂಸ್ಥೆಯ ಪ್ರತಿನಿಧಿಯನ್ನು ತರಾಟೆಗೈದರು.

ಕೌಶಲಾಭಿವೃದ್ಧಿ ತರಬೇತಿಯ ಬಳಿಕ ಉದ್ಯೋಗ ಕೊಡಿಸುವಲ್ಲಿಯೂ ಎನ್‌ಜಿಒ ಸಂಸ್ಥೆಯ ಕಾರ್ಯನಿರ್ವಹಣೆ ನಿರೀಕ್ಷಿತ ಮಟ್ಟದಲ್ಲಿಲ್ಲ. ತರಬೇತಿ ಪಡೆದ 440 ಮಂದಿಯಲ್ಲಿ 252 ಮಂದಿಗೆ ಮಾತ್ರವೇ ಉದ್ಯೋಗ ದೊರಕಿಸಲಾಗಿದೆ ಎಂದು ಜಿ.ಪಂ. ಕಾರ್ಯನಿರ್ವಹಣಾಕಾರಿ ಡಾ.ಎಂ.ಆರ್. ರವಿ ಮಾಹಿತಿ ನೀಡಿದರು.
ತರಬೇತು ಪಡೆದ ಗ್ರಾಮೀಣ ಪ್ರದೇಶದವರು, ವಿಶೇಷವಾಗಿ ಮಹಿಳೆಯರು ನಗರದಲ್ಲಿ ಅಥವಾ ನಗರದ ಹೊರಗಡೆ ಉದ್ಯೋಗ ಮಾಡಲು ಒಪ್ಪುತ್ತಿಲ್ಲ ಎಂದು ಪ್ರತಿಧಿನಿ ಹೇಳಿದಾಗ, ಗ್ರಾಮೀಣ ಪ್ರದೇಶದ ಯುವ ಅಭ್ಯರ್ಥಿಗಳಿಗೆ ಸೂಕ್ತವಾದ ರೀತಿಯಲ್ಲಿ ತರಬೇತಿಯನ್ನು ನೀಡಿ ಅವರಿಗೆ ಉದ್ಯೋಗಾವಕಾಶಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಸಿಇಒ ಸಲಹೆ ನೀಡಿದರು.

ಜಿ+3 ಮಾದರಿ ವಸತಿ ಸಂಕೀರ್ಣ: 2000 ಮನೆ ನಿರ್ಮಾಣದ ಗುರಿ

ನಗರದಲ್ಲಿ ವಸತಿ ಯೋಜನೆಯಡಿ ನಿವೇಶನದ ಕೊರತೆ ಇರುವುದರಿಂದ ಜಿ+3 ಮಾದರಿಯ ವಸತಿ ಸಂಕೀರ್ಣಕ್ಕಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪದವು ಗ್ರಾಮದ ರಾಜೀವ್ ನಗರದಲ್ಲಿ 10 ಎಕರೆ, ಸುರತ್ಕಲ್ ಇಡ್ಯಾದಲ್ಲಿ 3.86 ಹಾಗೂ ಸುರತ್ಕಲ್‌ನಲ್ಲಿ 1.86 ಎಕರೆ ಜಾಗವನ್ನು ಗುರುತಿಸಲಾಗಿದೆ ಎಂದು ಮನಪಾ ಆಯುಕ್ತ ಮುಹಮ್ಮದ್ ನಝೀರ್ ಸಭೆಗೆ ಮಾಹಿತಿ ನೀಡಿದರು.

ರಾಜೀವ್ ನಗರದಲ್ಲಿ 930 ಮನೆಗಳ ನಿರ್ಮಾಣಕ್ಕೆ ಅನುಮೋದನೆ ದೊರಕಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ. ಸುತ್ಕಲ್‌ನಲ್ಲಿ 600 ಲಾನುಭವಿಗಳಿಗೆ ಮನೆ ಸಂಕೀರ್ಣಕ್ಕೆ ವಿಸ್ತೃತ ಯೋಜನಾ ವರದಿ ಸಿದ್ಧಗೊಂಡಿದೆ. ಸುರತ್ಕಲ್‌ನಲ್ಲಿ 300 ಲಾನುಭವಿಗಳು ಸೇರಿ ಒಟ್ಟು ನಗರದಲ್ಲಿ 2000 ಮನೆಗಳು ನಿರ್ಮಾಣವಾಗಲಿದೆ. ಮೂರು ವರ್ಷದ ಅವಯಲ್ಲಿ ಘಟಕ ವೆಚ್ಚ ತಲಾ 5 ಲಕ್ಷ ರೂ.ನಲ್ಲಿ ಮನೆ ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು.
ಅಮೃತ್ ಯೋಜನೆಯ 185.52 ಕೋಟಿ ರೂ.ಗಳಲ್ಲಿ 179.52 ಕೋಟಿ ರೂ.ಗಳನ್ನು ಒಳಚರಂಡಿ (ಯುಜಿಡಿ) ಕಾಮಗಾರಿಗೆ ಮೀಸಲಿರಿಸಲಾಗಿದೆ ಎಂದು ಮುಹಮ್ಮದ್ ನಝೀರ್ ಹೇಳಿದಾಗ, ಹಳೆಯ ಕಾಮಗಾರಿಗೆ ಅಮೃತ್ ಯೋಜನೆ ಬಳಕೆ ಯಾಕೆ ಎಂದು ಸಂಸದರು ಪ್ರಶ್ನಿಸಿದರು.

ಯುಜಿಡಿ: ಮಿಸ್ಸಿಂಗ್ ಲಿಂಕ್‌ಗಾಗಿ 28 ಕೋಟಿ ರೂ.
ಕುಡ್ಸೆಂಪ್‌ನಿಂದ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡು ಹಸ್ತಾಂತರವಾಗಿದೆ. ದ್ವಿತೀಯ ಹಂತದ ಯುಜಿಡಿ ಕಾಮಗಾರಿಯನ್ನು ಅಮೃತ್ ಯೋಜನೆ ಯಡಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಪ್ರಥಮ ಹಂತದ ಕಾಮಗಾರಿಯಲ್ಲಿ ಕೆಲವೊಂದು ತಪ್ಪಿಹೋಗಿರುವ ಸಂಪರ್ಕಗಳನ್ನು ಮರು ಜೋಡಣೆಗಾಗಿ 28 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಬಂದರು, ಕಾರ್‌ಸ್ಟ್ರೀಟ್‌ನ ಒಳಚರಂಡಿ ವ್ಯವಸ್ಥೆ ಹಳೆಯದಾಗಿದ್ದು, ಅದನ್ನು ಮಾರ್ಪಡಿಸುವ ಕಾರ್ಯ ನಡೆಯಲಿದೆ. ಸುರತ್ಕಲ್ ಏರಿಯಾದಲ್ಲಿ ಸಾಕಷ್ಟು ಸಂಪರ್ಕಗಳನ್ನು ತಪ್ಪಿ ಹೋಗಿದ್ದು, ಅದಕ್ಕಾಗಿ ಈ 28 ಕೋಟಿ ರೂ.ಗಳಲ್ಲಿ ಹೆಚ್ಚಿನ ಹಣ ವಿನಿಯೋಗವಾಗಲಿದೆ ಎಂದು ಮುಹಮ್ಮದ್ ನಝೀರ್ ವಿವರ ನೀಡಿದರು.

ಇ ಬ್ಯಾಂಕಿಂಗ್ ಯೋಜನೆ ಕುರಿತು ಮಾಹಿತಿ ನೀಡಿದ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಜಿಲ್ಲೆಯಲ್ಲಿ ಒಟ್ಟು 59,000 ಕೋಟಿ ರೂ. ಬ್ಯಾಂಕಿಂಗ್ ವ್ಯವಹಾರವಿದ್ದು, 21,000 ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ಒದಗಿಸಲಾಗಿದೆ ಎಂದರು.

ಕೇಂದ್ರದ ಮುದ್ರಾ ಶಿಶು ಯೋಜನೆಯಡಿ ಸ್ವ ಉದ್ಯೋಗಕ್ಕಾಗಿ 50,000 ರೂ.ವರೆಗಿನ ಸಾಲ ಯೋಜನೆಯಡಿ 94 ಕೋಟಿ ರೂ., ಮುದ್ರಾ ಕಿಶೋರ್ ಯೋಜನೆಯಡಿ 403 ಕೋಟಿ ರೂ., ಮುದ್ರಾ ತರುಣ್ ಯೋಜನೆಯಡಿ 206 ಕೋಟಿ ರೂ.ಗಳು ಸೇರಿದಂತೆ ಒಟ್ಟು 50,706 ಲಾನುಭವಿಗಳಿಗೆ 703 ಕೋಟಿ ರೂ. ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News