ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಮೆಸ್ಕಾಂ ಶಾಖೆಗೆ ಗ್ರಾಮಸ್ಥರಿಂದ ಮುತ್ತಿಗೆ
ಉಡುಪಿ, ಜೂ.13: ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿ ಮತ್ತು ಮೆಸ್ಕಾಂ ಬೇಜವಾಬ್ದಾರಿತನವನ್ನು ವಿರೋಧಿಸಿ ಕೆಮ್ಮಣ್ಣು -ಕೋಡಿಬೆಂಗ್ರೆ ಗ್ರಾಮಸ್ಥರು ಮಂಗಳವಾರ ನೇಜಾರಿನಲ್ಲಿರುವ ಮೆಸ್ಕಾಂ ಕಲ್ಯಾಣ ಪುರ ಶಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಉಪ್ಪಿನಾಂಶದಿಂದ ಕೂಡಿದ ಹವಾಮಾನದಿಂದಾಗಿ ಹೂಡೆಯಿಂದ ಕೋಡಿ ಬೆಂಗ್ರೆವರೆಗಿನ ನಾಲ್ಕು ಕಿ.ಮೀ. ವ್ಯಾಪ್ತಿಯ ವಿದ್ಯುತ್ ತಂತಿಯು ತುಕ್ಕು ಹಿಡಿದು ಆಗಾಗ್ಗೆ ವಿದ್ಯುತ್ ವ್ಯತ್ಯಯ ಉಂಟಾಗುತ್ತಿತ್ತು. ಇದಕ್ಕೆ ಪರಿಹಾರವಾಗಿ ಎರಡು ವರ್ಷಗಳ ಹಿಂದೆ ಈ ನಾಲ್ಕು ಕಿ.ಮೀ. ಉದ್ದಕ್ಕೆ 60ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ಕೇಬಲ್‌ನ್ನು ಆಳವಡಿಸಲಾಗಿತ್ತು. ಇದೀಗ ಕೇಬಲ್‌ನಲ್ಲಿ ಕಂಡು ಬಂದಿರುವ ತೊಂದರೆಯಿಂದ ಕಳೆದ ಆರು ದಿನಗಳಿಂದ ವಿದ್ಯುತ್ ಸಮಸ್ಯೆ ಎದುರಾಗಿದೆ.
ಈ ಬಗ್ಗೆ ಮೆಸ್ಕಾಂನವರಿಗೆ ಹಲವು ಬಾರಿ ದೂರು ಕೊಟ್ಟರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಮನೋಹರ್ ಕುಂದರ್ ಆರೋಪಿಸಿದರು.
ಪದೇ ಪದೇ ವಿದ್ಯುತ್ ಹೋಗುತ್ತಿರುವುದರಿಂದ ಸುತ್ತಲಿನ ಸುಮಾರು 500 ಮನೆಯವರಿಗೆ ತೊಂದರೆಯಾಗುತ್ತಿದೆ. ರಾತ್ರಿಯಿಂದ ಬೆಳಗ್ಗೆವರೆಗೆ ಪವರ್ ಕಟ್ ಆಗುವುದರಿಂದ ಶಾಲೆಗೆ ಹೋಗುವ ಮಕ್ಕಳು ರಾತ್ರಿ ನಿದ್ದೆ ಇಲ್ಲದೆ ಕಷ್ಟ ಪಡುತ್ತಿದ್ದಾರೆ. ಕಳೆದ ಆರು ದಿನಗಳಿಂದ ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಈ ಬಗ್ಗೆ ಮೆಸ್ಕಾಂ ದೂರು ನೀಡಿದರೆ ಸಿಬ್ಬಂದಿಗಳು ಇಲ್ಲ ಎಂಬ ಬೇಜವಾಬ್ದಾರಿ ತನದ ಉತ್ತರ ನೀಡುತ್ತಾರೆ ಎಂದು ಮುನೀರ್ ಕೋಡಿಬೆಂಗ್ರೆ ದೂರಿದರು.
ಎರಡು ವರ್ಷಗಳ ಹಿಂದೆ 60ಲಕ್ಷ ರೂ. ವೆಚ್ಚ ಮಾಡಿ ಹಾಕಲಾದ ಕೇಬಲ್ ನಲ್ಲಿ ಸಮಸ್ಯೆ ಕಂಡುಬಂದಿದೆ. ಇದು ಕಳಪೆ ಕಾಮಗಾರಿಯಾಗಿದೆ. ಇದಕ್ಕೆ ಮೆಸ್ಕಾಂ ನೇರ ಹೊಣೆ. ಈ ಸಂಬಂಧ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜಮಾಲ್ ತಿಳಿಸಿದರು.
ಮೆಸ್ಕಾಂ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು ಮೆಸ್ಕಾಂ ಸಹಾಯಕ ಇಂಜಿನಿಯರ್ ಸ್ಥಳ ಬರುವಂತೆ ಪಟ್ಟು ಹಿಡಿದರು. ಈ ಹಿನ್ನೆಲೆಯಲ್ಲಿ ವಿಭಾಗೀಯ ಅಧಿಕಾರಿ ನವೀನ್ ಆಗಮಿಸಿ ಪ್ರತಿಭಟನಕಾರರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಇದಕ್ಕೆ ಬಗ್ಗದ ಅವರು ಮೆಸ್ಕಾಂ ಕಚೇರಿಗೆ ಬಾಗಿಲು ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಬಳಿಕ ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರನ್ನು ಸಮಾಧಾನ ಪಡಿಸಿದರು. ಕೆಲ ಹೊತ್ತಿನ ಬಳಿಕ ಕಲ್ಯಾಣಪುರ ಶಾಖೆಗೆ ಆಗಮಿಸಿದ ಮೆಸ್ಕಾಂ ಸಹಾಯಕ ಇಂಜಿನಿಯರ್ ಪ್ರಶಾಂತ್ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಸದ್ಯಕ್ಕೆ ಹಿಂದಿನ ವಿದ್ಯುತ್ ತಂತಿಯಲ್ಲೇ ವಿದ್ಯುತ್ ಸರಬರಾಜು ಮಾಡಿ, ಸಮಸ್ಯೆಯಾದರೆ ಎರಡು ಗಂಟೆಯೊಳಗೆ ಸರಿಪಡಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಶೀಘ್ರದಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸದಿದ್ದರೆ ಮತ್ತೆ ಇಡೀ ಗ್ರಾಮಸ್ಥರ ಜೊತೆ ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.