ತನಿಖೆಗೆ ಆಗ್ರಹಿಸಿ ಸಚಿವ ಪ್ರಮೋದ್‌ಗೆ ಮನವಿ
ಉಡುಪಿ, ಜೂ.13: ಕುಂದಾಪುರ ತಾಲೂಕು ಶೇಡಿಮನೆ ಗ್ರಾಮದ ಅರಸಮ್ಮಕಾನು ಎಂಬಲ್ಲಿ ಮೂವರು ಯುವಕರ ಬೆದರಿಕೆಗೆ ಮಾನಸಿಕವಾಗಿ ನೊಂದು ವಿಷ ಪದಾರ್ಥ ಸೇವಿಸಿ ಈಗ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯ ಆತ್ಮಹತ್ಯೆ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಪ್ರಕರಣದ ಮೂವರು ಆರೋಪಿಗಳಲ್ಲಿ ವಿನಯ ಶೆಟ್ಟಿ ಎಂಬಾತನನ್ನು ಮಾತ್ರ ಪೋಲೀಸರು ಬಂಧಿಸಿದ್ದು, ಈ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿ ತಲೆಮರೆಸಿ ಕೊಂಡಿರುವ ಇನ್ನುಳಿದ ಇಬ್ಬರು ಆರೋಪಿಗಳಾದ ಪ್ರಸಾದ್ ಹೆಗ್ಡೆ ಮತ್ತು ಪ್ರಶಾಂತ್ ಹೆಗ್ಡೆ ಅವರನ್ನು ಕೂಡಾ ಅತೀ ಶೀಘ್ರವಾಗಿ ಬಂಧಿಸಿ ಸೂಕ್ತ ಕಾನೂನು ಕ್ರಮಕ್ಕೊಳಪಡಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಬಳಿಕ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ತನಿಖೆಯ ಪ್ರಗತಿಯ ಬಗ್ಗೆ ಮಾಹಿತಿ ಪಡೆಯಲಾಯಿತು. ಈ ಸಂದರ್ಭ ದಲ್ಲಿ ಸಂತ್ರಸ್ಥೆ ಬಾಲಕಿಯ ಪೋಷಕರು ಹಾಗೂ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಎಂ.ಮಹೇಶ್ ಕುಮಾರ್ ಮಲ್ಪೆ, ಗೌರವ ಸಲಹೆ ಗಾರರಾದ ಎ.ಶಿವಕುಮಾರ್ ಅಂಬಲಪಾಡಿ, ರಾಜುಪೂಜಾರಿ ಉಪ್ಪೂರು, ಕೋಶಾಧಿಕಾರಿ ಕುಶಲ್ ಕರ್ಕೇರ ನೇಜಾರು, ಜತೆ ಕಾರ್ಯದರ್ಶಿ ದಯಾನಂದ ಪೂಜಾರಿ ಉಗ್ಗೇಲ್‌ಬೆಟ್ಟು ಮುಂತಾದವರು ಉಪಸ್ಥಿತರಿದ್ದರು