×
Ad

ಗ್ರಾಮಸ್ಥರಿಂದ ಪ್ರತಿಭಟನೆ: ಆರೋಪಿಗಳ ಬಂಧನಕ್ಕೆ ಗಡುವು

Update: 2017-06-13 20:03 IST

ಅಮಾಸೆಬೈಲು, ಜೂ.13: ಶೇಡಿಮನೆ ಗ್ರಾಮದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಆತ್ಮಹತ್ಯೆ ಯತ್ನಕ್ಕೆ ಪ್ರಚೋದನೆ ನೀಡಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ಅರಸಮ್ಮಕಾನು ದೇವಸ್ಥಾನದ ವಠಾರದಲ್ಲಿ ಪ್ರತಿಭಟನೆ ನಡೆಸಿದರು.

ಜನಜಾಗೃತಿ ಹಾಗೂ ಖಂಡನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಬೆಳ್ವೆ ಗ್ರಾಪಂ ಮಾಜಿ ಅಧ್ಯಕ್ಷ ಉದಯ ಕುಮಾರ್ ಪೂಜಾರಿ ಬೆಳ್ವೆ, ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳಾದ ಪ್ರಶಾಂತ ಹೆಗ್ಡೆ ಮತ್ತು ಪ್ರಸಾದ್ ಹೆಗ್ಡೆಯನ್ನು 10 ದಿನದೊಳಗೆ ಬಂಧಿಸದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಪ್ರಕರಣವು ಅಮಾನವೀಯ ಕೃತ್ಯವಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.  ಕೆಲವರು ಈ ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ನಡೆಸುತ್ತಿರುವುದು ದುರಂತ. ಲೈಂಗಿಕ ಕಿರುಕುಳ ನೀಡಿದ ಆರೋಪಿಗಳಿಗೆ ಶಿಕ್ಷೆಯಾಗುವಲ್ಲಿ ಜಾತಿ, ರಾಜಕೀಯ, ಆರ್ಥಿಕ ಲೆಕ್ಕಾಚಾರ ಸಲ್ಲದು ಎಂದು ಅವರು ಹೇಳಿದರು.

ರಾಧಾಕೃಷ್ಣ ಕ್ರಮದಾರಿ, ಮುನಿಯಾಲು ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಆನಂದ ಪೂಜಾರಿ, ವರಂಗದ ಪ್ರಮೀಳಾ ಹರೀಶ್, ಮಂಜು ಬಿಲ್ಲವ ಕುಂದಾಪುರ, ಮಡಾಮಕ್ಕಿ ಗ್ರಾಪಂ ಮಾಜಿ ಅಧ್ಯಕ್ಷೆ ರತಿ ಶೆಟ್ಟಿ, ಮಡಾಮಕ್ಕಿ ಗ್ರಾಪಂ ಮಾಜಿ ಅಧ್ಯಕ್ಷ ಶೇಖರ ಶೆಟ್ಟಿ, ಜಿಲ್ಲಾ ಗೋರಕ್ಷಾ ಪ್ರಮುಖ್ ವೈ.ವಿಜಯಕುಮಾರ್ ಶೆಟ್ಟಿ, ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿ ಸೂರ್ಗೋಳಿ ಮಾತನಾಡಿದರು.

ಬಳಿಕ ಈ ಕುರಿತ ಮನವಿಯನ್ನು ಅಮಾಸೆಬೈಲು ಠಾಣಾಧಿಕಾರಿ ಬಿ.ಎನ್. ಸುದರ್ಶನ್ ಅವರಿಗೆ ಸಲ್ಲಿಸಲಾಯಿತು. ಅಧ್ಯಕ್ಷತೆಯನ್ನು ಮಡಾಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜು ಕುಲಾಲ್ ವಹಿಸಿದ್ದರು. ಈ ಸಂದರ್ಭದಲ್ಲಿ ಬೆಳ್ವೆ ಗ್ರಾಪಂ ಅಧ್ಯಕ್ಷೆ ಶೋಭಾ ಶೆಟ್ಟಿ, ಬೆಳ್ವೆ ಗ್ರಾಪಂ ಉಪಾಧ್ಯಕ್ಷ ಸುರೇಂದ್ರ ನಾಯ್ಕ ಯಳಂತೂರು, ಎಪಿಎಂಸಿ ಸದಸ್ಯ ಬಾಲಕೃಷ್ಣ ಶೆಟ್ಟಿ ಮಡಾಮಕ್ಕಿ, ಮಡಾಮಕ್ಕಿ ಗ್ರಾಪಂ ಸದಸ್ಯೆ ಮೇರಿ ಸಾಜನ್, ತಾಪಂ ಸದಸ್ಯ ಚಂದ್ರ ಶೇಖರ ಶೆಟ್ಟಿ ಸೂರ್ಗೋಳಿ ಮೊದಲಾದವರು ಉಪಸ್ಥಿತರಿದ್ದರು. ಗಣೇಶ್ ಅರಸಮ್ಮ ಕಾನು ಕಾರ್ಯಕ್ರಮ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News