×
Ad

ಮಲ್ಯಗೆ ಡಿ. 4ರವರೆಗೆ ಜಾಮೀನು ವಿಸ್ತರಣೆ

Update: 2017-06-13 20:27 IST

ಲಂಡನ್, ಜೂ. 13: ಬ್ರಿಟನ್‌ನಲ್ಲಿ ತಲೆಮರೆಸಿಕೊಂಡಿರುವ ಭಾರತೀಯ ಉದ್ಯಮಿ ವಿಜಯ ಮಲ್ಯರ ಜಾಮೀನನ್ನು ಇಲ್ಲಿನ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಂಗಳವಾರ ಡಿಸೆಂಬರ್ 4ರವರೆಗೆ ವಿಸ್ತರಿಸಿದೆ.ಅದೇ ವೇಳೆ, ಭಾರತ ಸರಕಾರ ಹೂಡಿರುವ ಗಡಿಪಾರು ಪ್ರಕರಣದಲ್ಲಿ ತನ್ನನ್ನು ಸಮರ್ಥಿಸಿಕೊಳ್ಳಲು ತನ್ನ ಬಳಿ ‘ಬೇಕಾದಷ್ಟು ಪುರಾವೆ’ಗಳಿವೆ ಎಂದು ಮಲ್ಯ ಹೇಳಿದ್ದಾರೆ.

ಭಾರತದ ಪರವಾಗಿ ಕ್ರೌನ್ ಪ್ರಾಸಿಕ್ಯೂಶನ್ ಸರ್ವಿಸಸ್‌ನ ವಕೀಲ ಆ್ಯರಾನ್ ವಾಟ್ಕಿನ್ಸ್ ಮತ್ತು ಮಲ್ಯ ಪರವಾಗಿ ಬೆನ್ ವಾಟ್ಸನ್‌ರ ವಾದಗಳನ್ನು ಆಲಿಸಿದ ಬಳಿಕ ಮ್ಯಾಜಿಸ್ಟ್ರೇಟ್ ಎಮ್ಮಾ ಆರ್ತ್‌ಬಟ್‌ನಾಟ್ ಮುಂದಿನ ವಿಚಾರಣೆಯನ್ನು ಜುಲೈ 6ಕ್ಕೆ ನಿಗದಿಪಡಿಸಿದರು.

ಭಾರತದ ಬ್ಯಾಂಕ್‌ಗಳಿಗೆ 9,000 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ವಂಚಿಸಿ ಬ್ರಿಟನ್‌ಗೆ ಪರಾರಿಯಾಗಿರುವ ಮಲ್ಯರನ್ನು ಎಪ್ರಿಲ್ 18ರಂದು ಬ್ರಿಟನ್‌ನಲ್ಲಿ ಬಂಧಿಸಲಾಗಿತ್ತು ಹಾಗೂ ಬಂಧನದ ಮರುಕ್ಷಣವೇ ಜಾಮೀನು ನೀಡಲಾಗಿತ್ತು.
ನ್ಯಾಯಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ 61 ವರ್ಷದ ಮಲ್ಯ, ‘‘ನಾನು ಯಾವ ನ್ಯಾಯಾಲಯದಿಂದಲೂ ತಪ್ಪಿಸಿಕೊಂಡಿಲ್ಲ. ನನ್ನ ಪರವಾಗಿ ಮಂಡಿಸಲು ನನ್ನ ಬಳಿ ಸಾಕಷ್ಟು ಪುರಾವೆಯಿದೆ’’ ಎಂದರು.

ಬಿಲಿಯಗಟ್ಟಳೆ ಪೌಂಡ್‌ನ ಕನಸು ಕಾಣುತ್ತಿರಿ!
‘‘ಬಿಲಿಯಗಟ್ಟಳೆ ಪೌಂಡ್‌ನ ಕನಸು ಕಾಣುತ್ತಾ ಇರಿ’’- ಹೀಗೆಂದು ಪತ್ರಕರ್ತರಿಗೆ ತಿರುಗೇಟು ಕೊಟ್ಟವರು ವಿಜಯ ಮಲ್ಯ.

ವಿಚಾರಣೆಯ ಬಳಿಕ ನ್ಯಾಯಾಲಯದಿಂದ ಹೊರಡುವ ವೇಳೆ ತನ್ನನ್ನು ಮುತ್ತಿಕೊಂಡ ಪತ್ರಕರ್ತರೊಂದಿಗೆ ಮಾತನಡುತ್ತಾ, ‘‘ನಿಮ್ಮ ಪ್ರಶ್ನೆಗಳನ್ನು ಸಮರ್ಥಿಸಿಕೊಳ್ಳಲು ನಿಮ್ಮ ಬಳಿ ಪುರಾವೆಗಳಿದ್ದರೆ, ನೀವು ಬಿಲಿಯಗಟ್ಟಳೆ ಪೌಂಡ್‌ಗಳ ಬಗ್ಗೆ ಕನಸು ಕಾಣುತ್ತಾ ಇರಬಹುದು. ನಿಮಗೆ ವಾಸ್ತವಾಂಶಗಳು ಗೊತ್ತಿಲ್ಲ, ಹಾಗಾಗಿ, ಅಪ್ರಸ್ತುತ ಪ್ರಶ್ನೆಗಳನ್ನು ಕೇಳಬೇಡಿ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News