×
Ad

ವಕ್ವಾಡಿಯಲ್ಲಿ ಕರಾವಳಿ ಕರ್ನಾಟಕದ ಪ್ರಥಮ ಇಂಗು ಬಾವಿ

Update: 2017-06-13 20:58 IST

ಕುಂದಾಪುರ, ಜೂ.13: ಈ ಬಾರಿಯ ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ತತ್ತರಿಸಿ ಹೋಗಿದ್ದ ಕೋಟೇಶ್ವರ ವಕ್ವಾಡಿ ಗುರುಕುಲ ವಿದ್ಯಾಸಂಸ್ಥೆಯು ವಿನೂತನ ಹಾಗೂ ವಿಶಿಷ್ಟ ಇಂಗು ಬಾವಿ ನಿರ್ಮಿಸಿ ನೈಸರ್ಗಿಕ ಪ್ರಕ್ರಿಯೆ ಮೂಲಕ ವರ್ಷವಿಡೀ ನೀರಿನ ಪ್ರಯೋಜನ ಪಡೆಯುವ ಪ್ರಯೋಗಕ್ಕೆ ಕೈ ಹಾಕಿದೆ.

ಈಗಾಗಲೇ ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಯಶಸ್ವಿಯಾಗಿರುವ ಈ ಪ್ರಯೋಗವು ಕರಾವಳಿ ಕರ್ನಾಟಕದಲ್ಲಿ ನಡೆಯುತ್ತಿರುವುದು ಇದೇ ಪ್ರಥಮ. ಬೆಂಗಳೂರಿನ ರೈನ್ ವಾಟರ್ ಕ್ಲಬ್‌ನ ಎಸ್.ವಿಶ್ವನಾಥ್ ಮಾರ್ಗದರ್ಶನದಲ್ಲಿ ಮತ್ತು ಜಲತಜ್ಞ ಶ್ರೀಪಡ್ರೆಯವರ ಮುತುವರ್ಜಿಯಲ್ಲಿ ಹೊಸ ಪ್ರಯೋಗವಾಗಿರುವ ಇಂಗು ಬಾವಿಯನ್ನು ನಿರ್ಮಿಸಲಾಗಿದೆ.

10ವರ್ಷಗಳಿಂದ ನಡೆಯುತ್ತಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ಎರಡು ತೆರೆದ ಮತ್ತು ಎರಡು ಕೊಳವೆ ಬಾವಿಗಳಿದ್ದು, ಕಳೆದ ವರ್ಷ ಎಪ್ರಿಲ್‌ನಲ್ಲಿ ನೀರಿಗೆ ಹಾಹಾಕಾರ ಉಂಟಾಗಿ ಸಮಸ್ಯೆ ಎದುರಾಯಿತು. ಅದಕ್ಕಾಗಿ ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ವಿನೂತನ ಪ್ರಯೋಗಕ್ಕೆ ಸಂಸ್ಥೆ ಮುಂದಾಗಿದೆ.

ಪೋಲಾಗುವ ಮಳೆಯ ನೀರನ್ನು ಇಂಗಿಸಿ ಆ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ಸುಮಾರು 20 ಎಕರೆ ಪ್ರದೇಶದಲ್ಲಿರುವ ಶಿಕ್ಷಣ ಸಂಸ್ಥೆಗೆ ಪ್ರತಿದಿನ ಬೇಕಾಗುವ 50ಸಾವಿರ ಲೀಟರ್ ನೀರಿನ ವ್ಯವಸ್ಥೆಯನ್ನು ಕಂಡುಕೊಳ್ಳಲಾಗಿದೆ. ಸಂಸ್ಥೆಯ ಆವರಣದ ಬೇರೆ ಬೇರೆ ಕಡೆಗಳಲ್ಲಿ ಮೂರು ಅಡಿ ಅಗಲ ಮತ್ತು 20 ಅಡಿ ಆಳದ ಎರಡು ಇಂಗು ಬಾವಿಯನ್ನು ನಿರ್ಮಿಸಲಾಗಿದೆ. ಸಂಸ್ಥೆಯ ಕಟ್ಟಡಗಳಿಂದ ಪೈಪುಗಳ ಮೂಲಕ ಮಳೆ ನೀರು ನೇರವಾಗಿ ಈ ಬಾವಿಗೆ ಬೀಳುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಎರಡು ಇಂಗು ಗುಂಡಿಗಳನ್ನು ನಿರ್ಮಿಸಿ ಅದನ್ನು ಮರಳು ಮತ್ತು ಜಲ್ಲಿಕಲ್ಲಿನಿಂದ ಮುಚ್ಚಲಾ ಗಿದೆ. ಅದರ ಎರಡು ಬದಿಗಳಲ್ಲಿ ಹೂಳು ಗುಂಡಿಯನ್ನು ನಿರ್ಮಿಸಲಾಗಿದೆ. ಹರಿದು ಬರುವ ಮಳೆ ನೀರು ಹೂಳು ಗುಂಡಿಯನ್ನು ಸೇರುವ ಮೂಲಕ ಅದರಲ್ಲಿರುವ ಕಸಕಡ್ಡಿಗಳನ್ನು ಅಲ್ಲೇ ಉಳಿಸುವಂತೆ ಮಾಡಲಾಗಿದೆ. ಶುದ್ದ ನೀರು ಇಂಗು ಗುಂಡಿ ಸೇರಿ ಅಂತರ್ಜಲವನ್ನು ವೃದ್ಧಿಸುತ್ತದೆ ಎನ್ನುತ್ತಾರೆ ಬಾಂಡ್ಯ ಎಜ್ಯುಕೇಶನಲ್ ಟ್ರಸ್ಟ್‌ನ ಜಂಟಿ ಆಡಳಿತ ನಿರ್ದೇಶಕ ಸುಭಾಶ್ಚಂದ್ರ ಶೆಟ್ಟಿ.

ಬಾವಿ ಸಂಸ್ಕೃತಿ ಅಗತ್ಯ: ಇಂದು ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾದ ಜಲಸಂಕ್ಷಣಾ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜಲತಜ್ಞ ಶ್ರೀಪಡ್ರೆ ಮಾತನಾಡಿ, ಕರಾವಳಿ ಕರ್ನಾಟಕದಲ್ಲಿ ಇಂಗು ಬಾವಿ ನಿರ್ಮಿಸುತ್ತಿರುವುದು ಇದೇ ಪ್ರಥಮ. ನೀರು ಇಂಗಿಸುವ ಹಲವು ವಿಧಾನಗಳಲ್ಲಿ ಇದು ಒಂದು. ಬಾವಿಗೆ 400 ವರ್ಷಗಳ ಇತಿಹಾಸ ಇದ್ದರೆ ಕೊಳವೆ ಬಾವಿಗೆ ಕೇವಲ 60 ವರ್ಷಗಳ ಇತಿಹಾಸ ಇರುವುದು. ಆದುದರಿಂದ ನಾವು ಮತ್ತೆ ಬಾವಿ ಸಂಸ್ಕೃತಿಯತ್ತ ತೆರಳಬೇಕಾಗಿದೆ ಎಂದರು.

ಕಾರ್ಯಕ್ರಮವನ್ನು ಬಾಂಡ್ಯ ಎಜ್ಯುಕೇಶನಲ್ ಟ್ರಸ್ಟ್‌ನ ಸಂಸ್ಥಾಪಕ ಬಸ್ರೂರು ಅಪ್ಪಣ್ಣ ಹೆಗ್ಡೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಶ್ರೀಲತಾ, ಟ್ರಸ್ಟ್‌ನ ಜಂಟಿ ಆಡಳಿತ ನಿರ್ದೇಶಕಿ ಅನುಪಮ ಎಸ್.ಶೆಟ್ಟಿ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News