ಬ್ಯಾಂಕ್ ಉದ್ಯೋಗಿ ನೇಣು ಬಿಗಿದು ಆತ್ಮಹತ್ಯೆ
ಪುತ್ತೂರು,ಜೂ.13 : ಪುತ್ತೂರಿನ ಐಸಿಐಸಿಐ ಬ್ಯಾಂಕ್ ಉದ್ಯೋಗಿಯೂ ಆಗಿರುವ ಅವಿವಾಹಿತ ಯುವಕನೊಬ್ಬ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ಪಳಂಬೆ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ನಿಡ್ಪಳ್ಳಿ ಗ್ರಾಮದ ಪಳಂಬೆ ನಿವಾಸಿ ಸುಂದರ ಪೂಜಾರಿ ಎಂಬವರ ಪುತ್ರ ಹರೀಶ್ ಪೂಜಾರಿ (28) ಆತ್ಮಹತ್ಯೆ ಮಾಡಿಕೊಂಡ ಯುವಕ.
ಪುತ್ತೂರಿನ ಐಸಿಐಸಿಐ ಬ್ಯಾಂಕ್ ಉದ್ಯೋಗಿಯೂ ಆಗಿರುವ ಹರೀಶ್ ಪೂಜಾರಿ ಅವರು ಕೆಯ್ಯೂರು ಗ್ರಾಮದ ಮಾಡಾವು ಸಮೀಪದ ಪಲ್ಲತ್ತಡ್ಕದಲ್ಲಿರುವ ಹೊಸಮ್ಮ ಹೋಂ ಪ್ರೊಡಕ್ಟ್‌ನ ಮಾಲಕರಾಗಿದ್ದರು. ಮಂಗಳವಾರ ಮನೆಯಲ್ಲಿದ್ದ ಅವರು ಬೆಳಗ್ಗಿನ ವೇಳೆ ಮನೆಯ ಅಡ್ಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹರೀಶ್ ಪೂಜಾರಿ ಅವರ ತಂದೆ ಸುಂದರ ಪೂಜಾರಿ ಮತ್ತು ಸಹೋದರ ಪಲ್ಲತಡ್ಕದಲ್ಲಿರುವ ಹೊಸಮ್ಮ ಹೋಂ ಪ್ರೊಡಕ್ಟ್ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಹರೀಶ್ ಪೂಜಾರಿ ಮತ್ತು ಅವರ ತಾಯಿ ಹೊನ್ನಮ್ಮ ಅವರು ನಿಡ್ಪಳ್ಳಿಯ ಪಳಂಬೆಯಲ್ಲಿರುವ ಮನೆಯಲ್ಲಿದ್ದರು.
ತಾಯಿ ಮನೆಯಿಂದ ಹೊರಗಿದ್ದ ವೇಳೆ ಹರೀಶ್ ಪೂಜಾರಿ ಅವರು ಈ ಕೃತ್ಯ ಎಸಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರ ತಾಯಿ ಹೊನ್ನಮ್ಮ ಅವರು ನೀಡಿರುವ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.