ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣಕ್ಕೆ ಮುಂದಾದ ಸರಕಾರ

Update: 2017-06-13 16:01 GMT

ಬೆಂಗಳೂರು, ಜೂ.13: ರಾಜ್ಯ ಸರಕಾರವು ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ನಿಯಂತ್ರಿಸಲು ಮುಂದಾಗಿದ್ದು, ಈ ಸಂಬಂಧ ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007ಕ್ಕೆ ತಿದ್ದುಪಡಿ ಮಾಡಲು ನಿರ್ಧರಿಸಿದೆ.

ಮಂಗಳವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್‌ಕುಮಾರ್ ತಿದ್ದುಪಡಿ ವಿಧೇಯಕ ಮಂಡಿಸಿದ್ದಾರೆ.

ತಿದ್ದುಪಡಿ ವಿಧೇಯಕದ ಉದ್ದೇಶಗಳು: ರೋಗಿಗಳ ಕುಂದುಕೊರತೆಯ ಪರಿಹಾರಕ್ಕಾಗಿ ಜಿಲ್ಲಾ ಅಥವಾ ಮಹಾನಗರ ಕುಂದುಕೊರತೆ ಪರಿಹಾರ ಸಮಿತಿಯನ್ನು ರಚಿಸುವುದು. ಖಾಸಗಿ ವೈದ್ಯಕೀಯ ಸಂಸ್ಥೆಗಳು ಪ್ರತಿಯೊಂದು ವರ್ಗದ ಚಿಕಿತ್ಸೆಗೆ ಸಂಗ್ರಹಿಸಬೇಕಾದ ದರಗಳು ಅಥವಾ ಚಾರ್ಜುಗಳನ್ನು ನಿಗದಿಪಡಿಸಲು ರಾಜ್ಯ ಸರಕಾರಕ್ಕೆ ಅಧಿಕಾರ ನೀಡುವುದು.

ತಜ್ಞರ ಸಮಿತಿಯ ಶಿಫಾರಸ್ಸಿನ ಮೇರೆಗೆ ಬೇರೆ ಬೇರೆ ವರ್ಗದ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಬೇರೆ ಬೇರೆ ದರಗಳನ್ನು ಅಧಿಸೂಚಿಸುವುದು. ರಾಜ್ಯ ಸರಕಾರವು ನಿಗದಿಪಡಿಸಿದಕ್ಕಿಂತ ಹೆಚ್ಚಿನ ದರಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳು ಸಂಗ್ರಹಿಸಿದಲ್ಲಿ, 25 ಸಾವಿರ ರೂ.ಗಳಿಗಿಂತ ಕಡಿಮೆ ಇಲ್ಲದ, 5 ಲಕ್ಷ ರೂ.ಗಳವರೆಗೆ ವಿಸ್ತರಿಸಬಹುದಾದ ದಂಡ ಮತ್ತು ಆರು ತಿಂಗಳುಗಳಿಗಿಂತ ಕಡಿಮೆ ಇಲ್ಲದ, ಆದರೆ, ಮೂರು ವರ್ಷಗಳಿಗೆ ವಿಸ್ತರಿಸಬಹುದಾದ ಜೈಲುವಾಸವನ್ನು ವಿಧಿಸುವುದು.

ನೋಂದಣಿ ಪ್ರಾಧಿಕಾರವನ್ನು ಪುನರ್ ರಚಿಸುವುದು, ಅಧಿನಿಯಮದ ಅನುಸೂಚಿಯಲ್ಲಿರುವಂತೆ ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ರೋಗಿಯ ಸನ್ನದು ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಯ ಸನ್ನದನ್ನು ನಿರ್ದಿಷ್ಟಪಡಿಸುವುದು, ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಯಿಂದ ಅಥವಾ ರೋಗಿಯ ಪ್ರತಿನಿಧಿಯಿಂದ ಮುಂಗಡ ಪಾವತಿಯನ್ನು ಒತ್ತಾಯಪಡಿಸುವಂತಿಲ್ಲ.

ಸಂಬಂಧಪಟ್ಟ ವ್ಯಕ್ತಿಗೆ ಮೃತ ದೇಹವನ್ನು ಹಸ್ತಾಂತರಿಸುವ ಸಮಯದಲ್ಲಿ ಯಾವುದೆ ಬಾಕಿ ಮೊತ್ತಕ್ಕೆ ಒತ್ತಾಯಿಸದೇ ತರುವಾಯದಲ್ಲಿ ಬಾಕಿಗಳನ್ನು ಸಂಗ್ರಹಿಸುವುದು ಮತ್ತು 19ನೆ ಪ್ರಕರಣದಡಿಯಲ್ಲಿ ವಿಧಿಸಬಹುದಾದ ಕೆಲವು ದಂಡಗಳನ್ನು ವಿಧಿಸುವುದು, ಕೆಲವು ಇತರ ಆನುಷಂಗಿಕ ಅಥವಾ ಪ್ರಾಸಂಗಿಕವಾದ ತಿದ್ದುಪಡಿಗಳನ್ನು ಮಾಡಲಾಗಿದೆ.

ರಾಜ್ಯ ಸಿವಿಲ್ ಸೇವೆಗಳ ವಿಧೇಯಕ: ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ-2017ವನ್ನು ರಮೇಶ್‌ಕುಮಾರ್ ವಿಧಾನಸಭೆಯಲ್ಲಿ ಮಂಡಿಸಿದರು.

ಉದ್ದೇಶಗಳು: ಒಂದೇ ಸ್ಥಳದಲ್ಲಿ 10 ವರ್ಷಗಳನ್ನು ಪೂರೈಸಿದ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದಾರೆ. ಸಾರ್ವಜನಿಕ ಹಿತಾಸಕ್ತಿಯಲ್ಲಿ ಅವರನ್ನು ವರ್ಗಾವಣೆ ಮಾಡುವುದಕ್ಕಾಗಿ ರಾಜ್ಯ ಸಿವಿಲ್ ಸೇವೆಗಳ(ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ಅಧಿನಿಯಮ 2011ರ 6ನೇ ಪ್ರಕರಣವನ್ನು ತಿದ್ದುಪಡಿ ಮಾಡುವ ಮೂಲಕ ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆಯನ್ನು ಶೇ.5ರಿಂದ ಶೇ.15ಕ್ಕೆ ಏರಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News