ಉಡುಪಿ : ಪ್ಯಾಂಟ್ ಕಿಸೆಯಲ್ಲಿದ್ದ ಮೊಬೈಲ್‌ನಲ್ಲಿ ಬೆಂಕಿ!

Update: 2017-06-13 17:43 GMT

ಉಡುಪಿ, ಜೂ.13: ಬೈಕ್ ಸವಾರರೊಬ್ಬರ ಪ್ಯಾಂಟ್ ಕಿಸೆಯಲ್ಲಿದ್ದ ಮೊಬೈಲ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ಅಪರಾಹ್ನ 1:30ರ ಸುಮಾರಿಗೆ ಇಂದ್ರಾಳಿಯಲ್ಲಿ ನಡೆದಿದೆ.

ರೈಲು ಟಿಕೆಟ್ ಬುಕ್ ಮಾಡಲೆಂದು ಕಟಪಾಡಿಯ ಮಂಜುನಾಥ್ ಎಂಬವರು ತನ್ನ ಪತ್ನಿ ಜೊತೆ ಬೈಕಿನಲ್ಲಿ ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ಹೋಗುತ್ತಿದ್ದರು. ಮಣಿಪಾಲ -ಉಡುಪಿ ಮುಖ್ಯ ರಸ್ತೆಯಿಂದ ಇಂದ್ರಾಳಿಯಲ್ಲಿ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಬೈಕ್ ತಿರುಗಿಸುವಾಗ ಮಂಜುನಾಥ್‌ರ ಪ್ಯಾಂಟ್ ಕಿಸೆ ಯಲ್ಲಿದ್ದ ಮೈಕ್ರೋಮ್ಯಾಕ್ಸ್ ಕಂಪನಿಯ ಮೊಬೈಲ್ ತುಂಬಾ ಬಿಸಿಯಾಯಿತು.

ಬೈಕಿನಲ್ಲಿ ಹೋಗುತ್ತಿರುವಾಗ ಅವರ ಕಿಸೆಯಿಂದ ಹೊಗೆ ಬರುತ್ತಿರುವುದು ಕಂಡುಬಂತು. ಕೂಡಲೇ ಅಪಾಯವನ್ನು ಅರಿತ ಅವರು ಬೈಕನ್ನು ಅಲ್ಲೇ ರಸ್ತೆ ಬದಿಯಲ್ಲಿ ನಿಲ್ಲಿಸಿ ಮೊಬೈಲ್‌ನ್ನು ಕಿಸೆಯಿಂದ ತೆಗೆದು ರಸ್ತೆಗೆ ಎಸೆದರು. ರಸ್ತೆಗೆ ಬಿದ್ದ ಮೊಬೈಲ್‌ನಿಂದ ಬ್ಯಾಟರಿ ಪ್ರತ್ಯೇಕಗೊಂಡಿತು. ಇದರಿಂದ ಮೊಬೈಲ್ ಸ್ಪೋಟಗೊಳ್ಳದೆ ಅನಾಹುತವೊಂದು ತಪ್ಪಿದಂತಾಯಿತು.

ಬೆಂಕಿಯಿಂದ ಬ್ಯಾಟರಿ ಸಂಪೂರ್ಣ ಸುಟ್ಟು ಹೋಗಿದೆ. ಕಿಸೆಯಲ್ಲಿಯೇ ಬೆಂಕಿ ಕಾಣಿಸಿಕೊಂಡಿರುವುದರಿಂದ ಮೊಬೈಲ್‌ನೊಂದಿಗೆ ಇದ್ದ ಕರ್ಚಿಫ್ ಸುಟ್ಟು ಹೋಗಿದೆ. ಅಲ್ಲದೆ, ಅವರ ತೊಡೆಯ ಭಾಗದ ಚರ್ಮದಲ್ಲಿ ಸುಟ್ಟ ಗಾಯ ಆಗಿದೆ. ಮೊಬೈಲ್‌ನಲ್ಲಿ ಬೆಂಕಿ ಕಾಣಿಸಿಕೊಂಡ ವಿಚಾರ ತಿಳಿದ ಸಾರ್ವಜನಿಕರು, ಬೈಕ್ ಸವಾರರು ಸ್ಥಳದಲ್ಲಿ ಜಮಾಯಿಸಿದರು. ‘ಉಡುಪಿಯ ಶೋರೂಂನಲ್ಲಿ ಒಂದು ವರ್ಷದ ಹಿಂದೆ ಮೊಬೈಲ್ ಖರೀದಿ ಸಿದ್ದೆ. ಈವರೆಗೆ ಯಾವುದೇ ತೊಂದರೆ ಆಗಿರಲಿಲ್ಲ. ಇಂದು ಶೇ.56ರಷ್ಟು ಬ್ಯಾಟರಿ ಚಾರ್ಚ್ ಮಾಡಿ ತೆಗೆದುಕೊಂಡು ಬಂದಿದ್ದೆ. ಕಿಸೆಯಲ್ಲಿದ್ದ ಮೊಬೈಲ್ ಬಿಸಿ ಆಗುವ ಅನುಭವವಾಗಿ ಕೂಡಲೇ ಕೈಗೆತ್ತಿಕೊಂಡೆ. ಆಗ ಮೊಬೈಲ್ ಕೆಂಡದಂತೆ ಉರಿಯುತ್ತಿತ್ತು. ಕೂಡಲೇ ರಸ್ತೆಗೆ ಎಸೆದಿರುವುದರಿಂದ ಮೊಬೈಲ್ ಸ್ಪೋಟ ಗೊಂಡಿಲ್ಲ’ ಎಂದು ಮಂಜುನಾಥ್ ಪತ್ರಿಕೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News